ತೊಕ್ಕೊಟ್ಟು: ಸಂಸದ ನಳಿನ್ ಹೇಳಿಕೆ ವಿರುದ್ದ ಡಿವೈಎಫ್‌ಐ ಪ್ರತಿಭಟನೆ
ಉಳ್ಳಾಲ , ಜ.2 : ದುಷ್ಕರ್ಮಿಗಳಿಂದ ದಾರುಣವಾಗಿ ಕೊಲೆಯಾದ ಕಾರ್ತಿಕ್‌ರಾಜ್ ಹಂತಕರನ್ನು ಬಂಧಿಸದೇ ಇರುವ ಪೊಲೀಸರ ವಿರುದ್ಧ ಭಾನುವಾರದಂದು ಕೊಣಾಜೆ ಠಾಣೆಯೆದುರು ನಡೆದ ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿರುದ್ಧ ಸೋಮವಾರ ಸಂಜೆ ಡಿವೈಎಫ್‌ಐ ಉಳ್ಳಾಲ ವಲಯವು ತೊಕ್ಕೊಟ್ಟಿನಲ್ಲಿ ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕಾಗಿ ಆಗ್ರಹಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ಕಾರ್ತಿಕ್ ರಾಜ್ ಕೊಲೆ ಆರೋಪಿಗಳನ್ನು ಬಂಧಿಸದೇ ಇದ್ದರೆ ಜಿಲ್ಲೆಗೇ ಬೆಂಕಿ ಇಡುತ್ತೇನೆಂದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತೀಯ ರಾಜಕೀಯ ಮಾಡುತ್ತಿದ್ದಾರೆ. ಜಿಲ್ಲೆ ಎಂದಾಕ್ಷಣ ಎಲ್ಲರೂ ಕೂಡಿ ಬಾಳುವ ಮನೆ ಇದ್ದಂತೆ. ಅಕಸ್ಮಾತ್ ತಪ್ಪುಗಳು ನಡೆದಲ್ಲಿ ಅದರ ವಿರುದ್ಧ ನ್ಯಾಯಸಮ್ಮತ ಹೋರಾಟ ನಡೆಸಬೇಕೇ ಹೊರತು ಜವಬ್ದಾರಿಯುತ ಚುನಾಯಿತ ಸಂಸದರು ಬೆಂಕಿ ಹಚ್ಚುವಂತಹ ಉದ್ರೇಕಕಾರಿ ಹೇಳಿಕೆಗಳು ನೀಡುವುದು ಸರಿಯಲ್ಲ. ತನ್ನ ಸ್ವಂತ ಜಿಲ್ಲೆಯನ್ನೇ ಬೆಂಕಿಯಿಡಲು ಹೊರಟ ಸಂಸದರು ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ನಿಮ್ಮದು ಬೆಂಕಿ ಹಾಕುವ ಇತಿಹಾಸವೇ ಆದಲ್ಲಿ ನೀವು ಹಾಕುವ ಬೆಂಕಿಯನ್ನು ನಂದಿಸಿದ ಇತಿಹಾಸ ನಮ್ಮದು. ನಮ್ಮ ಶಕ್ತಿ ಸಣ್ಣದಾದರೂ ನೀವು ಹಾಕುವ ಬೆಂಕಿ ಜಿಲ್ಲೆಯಾದ್ಯಂತ ವ್ಯಾಪಿಸದೇ ಇರುವ ಕೆಲಸವನ್ನು ನಾವು ಮಾಡುತ್ತೇವೆಂದು ಎಚ್ಚರಿಸಿದರು.
ಕಾರ್ತಿಕ್ ರಾಜ್ ಕೊಲೆಯನ್ನು ಸಿಓಡಿಗೆ ವಹಿಸುತ್ತೇವೆಂದು ಹೇಳುವ ಕಾಂಗ್ರೆಸ್‌ನ ನಿಲುವನ್ನು ಡಿವೈಎಫ್‌ಐ ಪ್ರಬಲವಾಗಿ ವಿರೋಧಿಸುತ್ತದೆ. ಸಿಓಡಿಗೆ ವಹಿಸಿದ ಯಾವುದೇ ಕೇಸುಗಳು ಪರಿಣಾಮಕಾರಿಯಾಗಿಲ್ಲ. ಬದಲಾಗಿ ಕೊಲೆ ತನಿಖೆಯನ್ನು ಉನ್ನತ ಮಟ್ಟದ ಅಧಿಕಾರಿಗಳ ತಂಡಕ್ಕೆ ವಹಿಸಬೇಕೆಂದು ಆಗ್ರಹಿಸಿದರು.
ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾರ್ ಬಿ.ಕೆ, ಮುಖಂಡರಾದ ಸಂತೋಷ್ ಬಜಾಲ್, ಜೀವನ್ ರಾಜ್ ಕುತ್ತಾರು, ಅಶೋಕ್ ಶೆಟ್ಟಿ ಚೆಂಬುಗುಡ್ಡೆ, ಇಬ್ರಾಹಿಂ ಮದಕ, ಸಲೀಂ ಮದಕ, ಜಯಂತ್ ಅಂಬ್ಲಮೊಗರು ಮೊದಲಾದವರು ಉಪಸ್ಥಿರಿದ್ದರು.
ಬಳಿಕ ಡಿವೈಎಫ್‌ಐ ವತಿಯಿಂದ ಸಂಸದ ನಳಿನ್ ಕುಮಾರ್ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ನೀಡಲಾಯಿತು.