ಶಿರಾಡಿಘಾಟ್ ಕಾಮಗಾರಿ ವಿಳಂಬ : ವಾಹನ ಸಂಚಾರಕ್ಕೆ ಅವಕಾಶ
ಮಂಗಳೂರು, ಜ. 2: ಶಿರಾಡಿಘಾಟ್‌ನ ಎರಡನೆ ಹಂತದ ಕಾಮಗಾರಿ ಇನ್ನೂ ವಿಳಂಬಗೊಳ್ಳುವ ಸಾಧ್ಯತೆ ಇದ್ದು, ಈ ಬಗ್ಗೆ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.
ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಇನ್ನು ಕೂಡ ಕಾಮಗಾರಿಗೆ ಬೇಕಾದ ಸಾಮಗ್ರಿಗಳನ್ನು ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಿಲ್ಲದಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಮುಂದಿನ 15 ದಿನದೊಳಗೆ ಸಾಮಗ್ರಿ ಸಂಗ್ರಹಗೊಂಡರೆ, ಕಾಮಗಾರಿ ಆರಂಭಿಸಲು ಸಾಧ್ಯವಾಗಬಹುದು ಎಂದು ಅಧಿಕಾರಿಗಳು ಸಭೆಯಲ್ಲಿ ಸಚಿವರ ಗಮನ ಸೆಳೆದರು.
2016ರ ಅಕ್ಟೋಬರ್‌ನಲ್ಲಿ ಅಗತ್ಯ ಸಾಮಗ್ರಿ ಸಂಗ್ರಹಿಸಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಇದುವರೆಗೆ ಶೇ.43.ರಷ್ಟು ಮಾತ್ರ ಸಾಮಗ್ರಿ ಸಂಗ್ರಹವಾಗಿದೆ.
ಒಟ್ಟು 12.5ಕಿ.ಮೀ ದುರಸ್ತಿ ಕಾರ್ಯ ಆಗಬೇಕಿದೆ. ಗುತ್ತಿಗೆ ಕಂಪೆನಿ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ನಿರೀಕ್ಷಿತ ಮಟ್ಟದ ಕೆಲಸಗಳು ಆಗುತ್ತಿಲ್ಲ. ಇದರಿಂದಾಗಿ ಕಾಮಗಾರಿಯಲ್ಲಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಮಗಾರಿ ಆರಂಭವಾದರೂ ರಸ್ತೆಯನ್ನು ಸಂಪೂರ್ಣ ಬಂದ್ ಮಾಡುವುದು ಬೇಡ. ಒಂದು ಪಾರ್ಶ್ವದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಒದಗಿಸಿ. ಅಲ್ಲದೆ, ಕೆಲಸ ಆರಂಭಿಸಿದ ಬಳಿಕ ಶೀಘ್ರ ಮುಗಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಂಟ್ವಾಳ ಬಿ.ಸಿ.ರೋಡ್ ನಡುವಿನ ರಸ್ತೆ ಅಗಲೀಕರಣಕ್ಕೆ ಎದುರಾಗಿರುವ ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ಇದೇ ಸಂದರ್ಭ ಸಚಿವ ರೈ ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.