×
Ad

ಸಂಸದ ನಳಿನ್ ಹೇಳಿಕೆಗೆ ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಖಂಡನೆ

Update: 2017-01-02 23:19 IST

ಪುತ್ತೂರು , ಜ. 2 : ಸಂಸದ ನಳಿನ್ ಕುಮಾರ್ ಕಟೀಲ್ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಖಂಡಿಸಿದೆ. 

ಈ ಬಗ್ಗೆ ಸೋಮವಾರ ಸಮಿತಿಯ ತುರ್ತು ಸಭೆಯು ಕಾಂಗ್ರೆಸ್ ಕಚೇರಿಯಲ್ಲಿ ನಡೆದು ಸಂಸದರ ಹೇಳಿಕೆಯನ್ನು ಖಂಡಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಮಾತನಾಡಿ , ಬಿಜೆಪಿ ಮತ್ತು ಪರಿವಾರ ಸಂಘಟನೆಗಳು ಕಳೆದ ಇಷ್ಟೂ ವರ್ಷಗಳಲ್ಲಿ ದೇಶದಾದ್ಯಂತ ಬರೀ ಬೆಂಕಿ ಹಚ್ಚುವ ಕೆಲಸವನ್ನೇ ಮಾಡಿಕೊಂಡು ಬಂದಿವೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮತ್ತೊಮ್ಮೆ ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಹೇಳಿಕೆ ನೀಡಿದ್ದಾರೆ. ಧರ್ಮ, ಧರ್ಮಗಳ ನಡುವೆ ಕೋಮು ಬೀಜವನ್ನು ಬಿತ್ತು, ಸಮಾಜವನ್ನು ಒಡೆಯುವುದು, ಮತೀಯ ಗಲಭೆ ಹುಟ್ಟು ಹಾಕಿ ಸಮಾಜದ ಸ್ವಾಸ್ಥ್ಯವನ್ನು ನಾಶ ಮಾಡುವುದು ಪರಿವಾರ ಸಂಘಟನೆಗಳ ಅಜೆಂಡಾ. ಬಿಜೆಪಿ ತನ್ನ ರಾಜಕೀಯ ಬೆಳವಣಿಗೆಗಾಗಿ ಸಾಮಾನ್ಯ ಜನರ ಭಾವನೆಗಳನ್ನು ಕೆರಳಿಸುತ್ತಲೇ ಬಂದಿದೆ. ಸಾಮಾಜಿಕ ಸಾಮರಸ್ಯಕ್ಕೆ ಬೆಂಕಿ ಹಚ್ಚುವುದೇ ಅವರ ಅಜೆಂಡಾ. ಅದನ್ನು ಈಗ ಸಂಸದರು ಬಾಯಿ ಬಿಟ್ಟು ಹೇಳುವ ಮೂಲಕ ಇನ್ನಷ್ಟು ಅಶಾಂತಿಯ ವಾತಾವರಣ ಹುಟ್ಟು ಹಾಕಲು ಯತ್ನಿಸಿದ್ದಾರೆ. ಸಂಸದರ ವಿರುದ್ಧ ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಮೊದಲು ರಾಜ್ಯದ ನಾನಾ ಕಡೆ ನಡೆದ ಘಟನೆಗಳಿಗೆ ಬೇರೆ ಬೇರೆ ಬಣ್ಣ ಹಚ್ಚಲು ಬಿಜೆಪಿ ಯತ್ನಿಸಿದೆ. ತನಿಖೆ ನಡೆದ ಬಳಿಕ ಎಲ್ಲ ಕಡೆ ಸತ್ಯ ಬಯಲಾಗಿದೆ ಎಂದು ಹೇಳಿದ ಅವರು ಸಂಸದರ ಈ ಹೇಳಿಕೆಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದರು.

ಪಕ್ಷದ ಮುಖಂಡರಾದ ಅಮಳ ರಾಮಚಂದ್ರ, ಕೃಷ್ಣ ಪ್ರಸಾದ್ ಆಳ್ವ, ಇಸಾಕ್ ಸಾಲ್ಮರ, ಸಾದಿಕ್ ಬರೆಪ್ಪಾಡಿ, ಮಹೇಶ್ ರೈ ಅಂಕೊತ್ತಿಮಾರ್, ಮೋನು ಬಪ್ಪಳಿಗೆ, ಬಿ.ಎ. ರಹಿಮಾನ್ ಬಪ್ಪಳಿಗೆ, ವಿಶಾಲಾಕ್ಷಿ, ಪೂರ್ಣೇಶ್ ಮಂಜಲ್ಪಡ್ಪು, ಗಣೇಶ್ ರಾವ್, ಯಾಕೂಬ್ ಹಾಜಿ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.

ವೆಲೇರಿಯನ್ ಡಯಾಸ್ ಸ್ವಾಗತಿಸಿದರು, ಗಣೇಶ್ ರಾವ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News