ಧರ್ಮಗಳು ಒಗ್ಗಟ್ಟಾದಲ್ಲಿ ಸುಂದರ ಸಮಾಜ ನಿರ್ಮಾಣ ಸಾಧ್ಯ
ಮಾಣಿಲ, ಜ.3: ಧರ್ಮಗಳು ಒಗ್ಗಾಟ್ಟಾಗಿ ನಿಂತಾಗ ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಬರಲು ಸಾಧ್ಯವಿಲ್ಲ. ಮಾನವೀಯ ಮೌಲ್ಯವನ್ನು ಎಲ್ಲೆಡೆ ಪಸರಿಸಿದಾಗ ಸಮಾಜದಲ್ಲಿ ಉತ್ತಮವಾಗಿ ಬದುಕಲು ಸಾಧ್ಯ ಎಂದು ಶ್ರೀಧಾಮ ಮಾಣಿ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಶನಿವಾರ ರಾತ್ರಿ ಪೆರುವಾಯಿ ಸಮೀಪದ ಕಡೆಂಗೋಡ್ಲು ಡೆನಿಮ್‌ಗೈಸ್ ಫ್ರೆಂಡ್ಸ್ ಸರ್ಕಲ್‌ನ 5ನೆ ವಾರ್ಷಿಕೋತ್ಸವ ಹಾಗೂ ಹೊಸ ವರ್ಷ ಆಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪೆರುವಾಯಿ-ವಾಣಿಲ ಶಾಂತಿಯ ನೆಲೆಯಾಗಿದೆ. ಅದು ಸೌಹಾರ್ದತೆಯ ಬದುಕಿಗೆ ಶಕ್ತಿ ನೀಡಿದೆ. ಎಲ್ಲಾ ಧರ್ಮ ಶ್ರದ್ಧೆಗಳು ಸೇರುವುದು ಒಂದೇ ಕಡೆಯಾಗಿದ್ದು, ಎಲ್ಲರೂ ಒಂದದಾಗ ಶಾಂತಿ ನೆಲೆಸುತ್ತದೆ ಎಂದರು. ನನ್ನ 18 ವರ್ಷಗಳ ಆಧ್ಯಾತ್ಮಿಕ ಜೀವನದಲ್ಲಿ ಇದು ಅವೀಸ್ಮರಣೀಯ ದಿನವಾಗಿದೆ. ಮೂರು ಧರ್ಮಗಳು ಒಂದೆಡೆ ಸೇರಿದ್ದು, ಸೌಹಾರ್ದತೆ ಉಳಿಯಲು ಸಾಧ್ಯವಾಗಿದ್ದು, ಹೊಸ ವರ್ಷದಲ್ಲಿ ಇದು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ. ಇದರಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ. ಮಾನವೀಯ ಮೌಲ್ಯ ಉತ್ಕೃಷ್ಟವಾದುದು ಅದು ಉಳಿಸುವ ಕಾರ್ಯ ನಡೆಯಬೇಕು ಎಂದರು.
ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನ ಧರ್ಮಗುರು ವಿನೋದ್ ಲೋಬೋ ಮಾತನಾಡಿ ಜಿಲ್ಲೆಯಲ್ಲಿ ಅಹಿತಕರ ನಡೆಯುವ ಸನ್ನಿವೇಶದಲ್ಲಿ ಪೆರುವಾಯಿಯ ಯುವಕರು ಮೂರು ಧರ್ಮದ ಧರ್ಮ ಗುರುಗಳನ್ನು ಸೇರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ್ದಾರೆ. ಸಮಾಜಕ್ಕೆ ನಾವು ಬೆಳಕ್ಕಾಗಬೇಕು. ಒಟ್ಟಾಗಿ ಬಾಳಿದಾಗ ಪ್ರೀತಿ ಉಂಟಾಗುತ್ತದೆ ಎಂದರು.
ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಖತೀಬು ಶರೀಫ್ ಮದನಿ ಮಾತನಾಡಿ ಪೆರುವಾಯಿ ಶಾಂತಿಯ ನಾಡಾಗಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಉಳಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದರು. ಕೊಲ್ಲತ್ತಡ್ಕ ಸರಕಾರಿ ಶಾಲೆಯ ಮುಖ್ಯ ಶಿಕ್ಷಕ ಕುಂಞ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಸಮರ ಸಾರಥಿ ಬಲೇ ತೆಲಿಪಾಳೆ ತಂಡದಿಂದ ಹಾಸ್ಯ ಕಾರ್ಯಕ್ರಮ ನಡೆಯಿತು.