×
Ad

41 ಕೋ.ರೂ.ನ ಚಿನ್ನಾಭರಣ ಕಳವು

Update: 2017-01-03 16:57 IST

ನ್ಯೂಯಾರ್ಕ್,ಜ.3: ಇಲ್ಲಿಯ ಟೈಮ್ಸ್ ಸ್ಕ್ವೇರ್‌ನಲ್ಲಿ ಹೊಸವರ್ಷವನ್ನು ಸ್ವಾಗತಿಸಲು ಸಾವಿರಾರು ಜನರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ ಮೂವರು ಕಳ್ಳರು ಮಾತ್ರ ಅಲ್ಲಿಯ ಅಂಗಡಿಯೊಂದಕ್ಕೆ ನುಗ್ಗಿ 41 ಕೋ.ರೂ.ವೌಲ್ಯದ ಚಿನ್ನಾಭರಣಗಳನ್ನು ದೋಚುವ ಮೂಲಕ ‘ಹ್ಯಾಪಿ ನ್ಯೂ ಇಯರ್ ’ಆಚರಿಸಿದ್ದಾರೆ.

ಇದೊಂದು ಯೋಜಿತ ಕೃತ್ಯವಾಗಿದ್ದು,ಒಳಗಿನವರ ಕೈವಾಡವಿರುವಂತೆ ಕಂಡು ಬರುತ್ತಿದೆ. ಶನಿವಾರ ಮಧ್ಯರಾತ್ರಿ ಹೊಸವರ್ಷ ಕಾಲಿಟ್ಟು ಸರಿಯಾಗಿ ಒಂದು ನಿಮಿಷಕ್ಕೆ ಟೈಮ್ಸ್ ಸ್ಕ್ವೇರ್‌ನ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ ಮೂವರು ಮುಸುಕುಧಾರಿ ಕಳ್ಳರು ಯಶಸ್ವಿ ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಆ ಸಂದರ್ಭ ಸುಮಾರು 20 ಲಕ್ಷ ಜನರು ಅಲ್ಲಿ ವರ್ಷಾಚರಣೆಗೆ ಸೇರಿದ್ದು, ಭದ್ರತೆಗೆ ನಿಯೋಜಿತ 7,000 ಪೊಲೀಸರು ಜನರನ್ನು ನಿಯಂತ್ರಿಸುತ್ತ ವ್ಯಸ್ತರಾಗಿರುತ್ತಾರೆ ಎಂದು ಸರಿಯಾಗಿಯೇ ಊಹಿಸಿದ್ದ ಕಳ್ಳರು ನಿರಾಯಾಸವಾಗಿ ತಮ್ಮ ಕೆಲಸವನ್ನು ಮುಗಿಸಿಕೊಂಡು ಪರಾರಿಯಾಗಿದ್ದಾರೆ.

ತನ್ನ ಅಪರೂಪದ ಹಳದಿ ಮತ್ತು ಗುಲಾಬಿ ವರ್ಣಗಳ ವಜ್ರಗಳ ಸಂಗ್ರಹಕ್ಕಾಗಿ ಖ್ಯಾತವಾಗಿರುವ ಈ ಗ್ರೆಗ್ ರುಥ್ ಚಿನ್ನಾಭರಣಗಳ ಮಳಿಗೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಮುಸುಕುಧಾರಿ ಕಳ್ಳರು ಸೆರೆಯಾಗಿದ್ದಾರೆ.

  ಕಟ್ಟಡದ ಆರನೇ ಮಹಡಿಯಲ್ಲಿರುವ ಮಳಿಗೆಗೆ ನುಗ್ಗಿದ ಕಳ್ಳರು ನಾಲ್ಕು ತಿಜೋರಿಗಳಿದ್ದ ಕೋಣೆಯ ಬೀಗವನ್ನು ಮುರಿದಿದ್ದಾರೆ. ತಿಜೋರಿಯ ಬೀಗವನ್ನು ಸಂಖ್ಯೆಗಳನ್ನು ಒತ್ತುವ ಮೂಲಕವೇ ತೆರೆಯಬಹುದಾಗಿದ್ದು, ಈ ಸಂಖ್ಯೆಗಳ ಜೋಡಣೆ ಕಳ್ಳರಿಗೆ ಚೆನ್ನಾಗಿ ತಿಳಿದಿರುವಂತಿದೆ. ಎರಡು ತಿಜೋರಿಗಳನ್ನು ಸುಲಭವಾಗಿಯೇ ತೆರೆದು 41 ಕೋ.ರೂ.ಗಳ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ. ಉಳಿದ ಎರಡು ತಿಜೋರಿಗಳ ಸುದ್ದಿಗೆ ಹೋಗಿಲ್ಲ. ಹೀಗಾಗಿ ಸುಮಾರು 70 ಲ.ಡಾ.ವೌಲ್ಯದ ಆಭರಣಗಳು ಸುರಕ್ಷಿತವಾಗಿವೆ.

ಈ ಮೂವರೂ ಫೋನ್‌ನಲ್ಲಿ ಮಾತನಾಡುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಮೂಡಿದೆ. ಹೀಗಾಗಿ ನಾಲ್ಕನೆಯ ವ್ಯಕ್ತಿ ಈ ಕಳ್ಳತನದಲ್ಲಿ ಭಾಗಿಯಾಗಿರಬಹುದು ಮತ್ತು ಕಳ್ಳರು ಆತನ ಬಳಿ ತಿಜೋರಿಯ ಬೀಗದ ಸಂಖ್ಯೆಗಳನ್ನು ಕೇಳುತ್ತಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News