ರಸ್ತೆ ಅಪಘಾತದ ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು
ಸುಳ್ಯ, ಜ.3 : ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊಡಿಯಾಲ ಬೈಲ್‌ನ ದಿವಂಗತ ಪಿಜಿನ ಎಂಬವರ ಪತ್ನಿ 60 ವರ್ಷ ಪ್ರಾಯದ ಕೇಪು ಸೋಮವಾರ ಮಧ್ಯಾಹ್ನ ದ್ವಾರಕ ಹೋಟೆಲ್‌ನ ಎದುರು ರಸ್ತೆ ದಾಟುತ್ತಿದ್ದಾಗ ಗಾಂಧಿನಗರ ಕಡೆಯಿಂದ ಬಂದ ಕಂದಡ್ಕದ ರವಿಚಂದ್ರ ಎಂಬವರು ಚಲಾಯಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತು. ಪರಿಣಾಮ ಕೇಪು ರಸ್ತೆಗೆ ಬಿದ್ದರು.
ಅವರ ತಲೆಗೆ ಗಂಭೀರ ಗಾಯವಾಗಿತ್ತು . ಬಳಿಕ ಮಂಜು ಎಂಬವರು ಹಾಗೂ ಅಲ್ಲಿದ್ದ ಇತರರು ವೃದ್ಧೆಯನ್ನು ರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದರು . ಅಲ್ಲಿಂದ ಕೆ.ವಿ.ಜಿ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ , ತಲೆಗೆ ಗಂಭೀರ ಏಟಾಗಿದ್ದರಿಂದ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ದಿದ್ದರು .
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಅವರು ಕೊನೆಯುಸಿರೆಳೆದರು. ಮೃತ ದೇಹವನ್ನು ಸುಳ್ಯಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.