ಮೆಲ್ಕಾರ್ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ ಹಾಗೂ ವಸ್ತು ಪ್ರದರ್ಶನ

Update: 2017-01-03 13:24 GMT

ಬಂಟ್ವಾಳ, ಜ. 3: ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸಾಮಾಜಿಕ ತಾಣಗಳಲ್ಲಿ ಕಾಲ ಕಳೆಯುವ ಬದಲು ಓದು ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಮಹತ್ವ ನೀಡಿದಾಗ ಉಜ್ವಲ ಭವಿಷ್ಯ ರೂಪಿಸಲು ಸಾಧ್ಯ ಎಂದು ಮಂಗಳೂರು ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎ.ಎಂ.ಖಾನ್ ಹೇಳಿದರು.

ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಮಂಗಳವಾರ ನಡೆದ 8ನೆ ವಾರ್ಷಿಕೋತ್ಸವ ಹಾಗೂ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭವಿಷ್ಯ ಹಿತದೃಷ್ಟಿಯಿಂದ ಹಾಗೂ ಸಾಮಾನ್ಯ ಜ್ಞಾನಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬೇಕು. ಆದರೆ ಆಧುನಿಕ ತಂತ್ರಜ್ಞಾನಗಳನ್ನು ಬರೇ ಸಾಮಾಜಿಕ ತಾಣಗಳನ್ನು ಉಪಯೋಗಿಸಿ ಕಾಲ ಹರಣ ಮಾಡುವುದರಿಂದ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಅಸಾಧ್ಯವಾಗಿದೆ ಎಂದು ಅವರು ಹೇಳಿದರು.

ಜೀವವಿರುವ ಎಲ್ಲ ಜನರು ಬದುಕುತ್ತಾರೆ. ಆದರೆ ಬದುಕಿನಲ್ಲಿ ಸನ್ನಡತೆ ಅತ್ಯಗತ್ಯವಾಗಿದೆ. ಸನ್ನಡತೆ ಇಲ್ಲದ ಬದುಕು ಬದುಕಿಯೂ ಸತ್ತಂತೆ ಎಂದು ಹೇಳಿದ ಅವರು, ವ್ಯಕ್ತಿತ್ವ ವಿಕಾಸ ಮತ್ತು ಸನ್ನಡತೆಯನ್ನು ವಿದ್ಯಾರ್ಥಿ ಜೀವನದಲ್ಲೇ ಮೈಗೂಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಾಸ ಮತ್ತು ಒಳ್ಳೆಯ ವರ್ತನೆ, ಸನ್ನಡತೆಯ ಮೂಲಕ ಮೆಲ್ಕಾರ್ ವುಮೆನ್ಸ್ ಕಾಲೇಜಿನಲ್ಲಿ ಕಲಿಯುವ ಮಕ್ಕಳು ಸಮಾಜದಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಜ್ಞಾನವನ್ನು ಎಲ್ಲೂ ಬೇಕಾದರೂ ಪಡೆಯಬಹುದು. ಆದರೆ ಮೌಲ್ಯಾಧಾರಿತ ಶಿಕ್ಷಣವನ್ನು ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಮಾತ್ರ ಪಡೆಯಲು ಸಾಧ್ಯ. ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ದೃಷ್ಟಿಯಿಂದ ಎಂಟು ವರ್ಷಗಳ ಹಿಂದೆ ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಆರಂಭಗೊಂಡಿರುವ ಮೆಲ್ಕಾರ್ ಮಹಿಳಾ ಕಾಲೇಜು ಇಂದು ಆರುನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುತ್ತಿರುವುದು ಮಹಾ ಸಾಧನೆಯಾಗಿದೆ. ಅದರಲ್ಲೂ ಪಠ್ಯ, ಪಠ್ಯೇತರ ಚಟುವಟಿಕೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮಾಡುತ್ತಿರುವ ವಿಶೇಷ ಸಾಧನೆಗಳು ಈ ಸಂಸ್ಥೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಅವರು ಶ್ಲಾಘಿಸಿದರು.

ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳು ಉನ್ನರ ಶಿಕ್ಷಣ ಪಡೆಯುತ್ತಿರುವುದೇ ವಿಶೇಷವಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ಈ ಕಾಲೇಜಿನಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ ಅವರು, ಮೆಲ್ಕಾರ್ ವುಮೆನ್ಸ್ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿನಿಯರು ಇತರ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿನಿಯರಿಗೆ ಮಾದರಿಯಾಗುವಂತಿರಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿ ಗೌರವಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಕೆ.ಎಸ್.ಯಾಸರ್ ಕಲ್ಲಡ್ಕ ಅವರಿಂದ ಪುರಾತನ ವಸ್ತುಗಳು, 194 ದೇಶದ ನೋಟು ಹಾಗೂ ನಾಣ್ಯಗಳು, ರಾಜ್ಯಡಳಿತದ ಕಾಲದ ನಾಣ್ಯಗಳ ವಸ್ತು ಪ್ರದರ್ಶನ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಚೆಯರ್‌ಮೆನ್ ಎಸ್.ಎಂ.ರಶೀದ್ ಹಾಜಿ ವಹಿಸಿದ್ದರು.

ಫಿಝಾ ಗ್ರೋಪ್‌ನ ಅಧ್ಯಕ್ಷ ಬಿ.ಎಂ.ಫಾರೂಕ್, ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

ಕಾಲೇಜಿನ ಟ್ರಸ್ಟಿ ಎಸ್.ಅಬ್ಬಾಸ್, ಝಕಾರಿಯಾ ಜೋಕಟ್ಟೆ, ಹಮೀದ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಬಿ.ಕೆ.ಅಬ್ದುಲ್ ಲತೀಫ್ ಕಾಲೇಜಿನ ವರದಿ ಮಂಡಿಸಿದರು.

ವಿದ್ಯಾರ್ಥಿನಿ ಖತೀಜ ಸ್ವನೂಫಾ ಸ್ವಾಗತಿಸಿದರು. ಅವ್ವಾ ಆಬಿದ ವಂದಿಸಿದರು. ನಶತ್ ಮೀಝಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News