×
Ad

ಜ.6ರಿಂದ ಉಡುಪಿಯಲ್ಲಿ ಸಂಸ್ಕೃತ ಅಖಿಲ ಭಾರತೀಯ ಅಧಿವೇಶನ

Update: 2017-01-03 19:24 IST

ಉಡುಪಿ, ಜ.3: ಸಂಸ್ಕೃತ ಕ್ಷೇತ್ರದ ಕಾರ್ಯಯೋಜನೆ ರೂಪಿಸಲು ಸಂಸ್ಕೃತ ಭಾರತಿಯ ಐದನೆ ಅಖಿಲ ಭಾರತೀಯ ಸಂಸ್ಕೃತ ಅಧಿವೇಶನವನ್ನು ಪರ್ಯಾಯ ಪೇಜಾವರ ಮಠದ ಸಹಯೋಗದೊಂದಿಗೆ ಜ.6, 7, 8ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ.

ಸಂಸ್ಕೃತ ಭಾರತಂ ಸಮರ್ಥ ಭಾರತಂ ಘೋಷವಾಕ್ಯದೊಂದಿಗೆ ನಡೆಯುವ ಈ ಅಧಿವೇಶನದಲ್ಲಿ ರಾಷ್ಟ್ರದ ನವೋತ್ಥಾನ ಕಾರ್ಯದಲ್ಲಿ ಸಂಸ್ಕೃತದ ಪಾತ್ರ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಸಾಮಾಜಿಕ ಸಾಮರಸ್ಯದಲ್ಲಿ ಸಂಸ್ಕೃತದ ಪಾತ್ರದ ಕುರಿತು ಚರ್ಚೆ, ಸಂವಾದ, ವಿಷಯ ಮಂಡನೆ ನಡೆಯಲಿದೆ ಎಂದು ಸಂಸ್ಕೃತ ಭಾರತೀಯ ಅಖಿಲ ಭಾರತ ಸಂಘಟನಾ ಮಂತ್ರಿ ದಿನೇಶ್ ಕಾಮತ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಡಿ.5ರಂದು ಸಂಜೆ 5:30ಕ್ಕೆ ದೃಶ್ಯ- ಶ್ರವ್ಯ ಪ್ರದರ್ಶಿನಿ ‘ಪರಂಪರಾ’ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ತಮಿಳು ಸಾಹಿತಿ ಜೋ ಡಿಕ್ರೂಸ ಉದ್ಘಾಟಿಸಲಿರುವರು. ಜ.6ರಂದು ಬೆಳಗ್ಗೆ 10ಗಂಟೆಗೆ ಅಧಿವೇಶನವನ್ನು ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಉದ್ಘಾಟಿಸಲಿರುವರು. ಜ.7ರಂದು ಸಂಜೆ 5ಗಂಟೆಗೆ ಚಿಂತಕ ಸುರೇಶ್ ಸೋನಿ ಸಂಸ್ಕೃತ ಭಾರತಂ ಸಮರ್ಥ ಭಾರತಂ ಕುರಿತು ವಿಶೇಷ ಭಾಷಣವನ್ನು ಮಾಡಲಿದ್ದಾರೆ.

ಜ.8ರಂದು ಸಂಜೆ 4ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಮಾನವ ಸಂಪನ್ಮೂಲ ವಿಕಾಸ ಸಚಿವ ಪ್ರಕಾಶ್ ಜಾವಡೇಕರ್, ಇಸ್ರೋ ಅಧ್ಯಕ್ಷ ಕಿರಣ್‌ಕುಮಾರ್ ಭಾಗವಹಿಸಲಿದ್ದಾರೆ. ದೇಶದ 500ಕ್ಕೂ ಹೆಚ್ಚು ಜಿಲ್ಲೆಗಳಿಂದ 2000ಕಾರ್ಯಕರ್ತರು, ಸಂಸ್ಕೃತ ವಿದ್ವಾಂಸರು, ವಿವಿಧ ಸಂಸ್ಕೃತ ವಿವಿಯ ಕುಲಪತಿಗಳು, ಶಿಕ್ಷಣ ತಜ್ಞರು ಈ ಅಧಿವೇಶನದಲ್ಲಿ ಪ್ರತಿನಿಧಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಕೋಶಾಧ್ಯಕ್ಷ ಟಿ.ಶಂಭು ಶೆಟ್ಟಿ, ಕಾರ್ಯದರ್ಶಿಗಳಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಸುಮತಾ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News