ಪುತ್ತೂರು ಫಿಲೋಮಿನಾ ವಿದ್ಯಾರ್ಥಿ ಪ್ರಶಾಂತ್ ನಾಯ್ಕಾ ರಾಷ್ಟ್ರೀಯ ಚೆಸ್ ಚಾಂಪಿಯನ್

Update: 2017-01-03 14:23 GMT

ಪುತ್ತೂರು, ಜ.3 : ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿರುವ ಪ್ರಶಾಂತ್ ಜೆ ನಾಯ್ಕಾ ಅವರು ಹೈದರಾಬಾದ್‌ನಲ್ಲಿ ನಡೆದ 1500 ರೇಟೆಡ್ ಒಳಗಿರುವ ರಾಷ್ಟ್ರೀಯ ಫಿಡೆ ಚೆಸ್ ಚಾಂಪಿಯನ್ಶಿಪ್‌ನಲ್ಲಿ ಹೊಸ ರಾಷ್ಟ್ರೀಯ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.

ದೇಶದ ಪ್ರಬಲ ಚೆಸ್ ಆಟಗಾರರು ಭಾಗವಹಿಸಿದ ಈ ಸ್ಪರ್ಧಾಕೂಟದಲ್ಲಿ ಪ್ರಶಾಂತ್ ಜೆ ನಾಯ್ಕ ಅವರು 9 ಸುತ್ತುಗಳಲ್ಲಿ ಸತತ ಪೈಪೋಟಿ ನೀಡಿ 8.5 ಅಂಕಗಳನ್ನು ಗಳಿಸಿ, ಚಾಂಪಿಯನ್ ಪಟ್ಟವನ್ನೇರಿದ್ದು, ಪಾರಿತೋಷಕ ಸಹಿತ ರೂ 80,000 ನಗದು ಬಹುಮಾನವನ್ನು ಪಡೆದಿದ್ದಾರೆ.

ಇದೇ ಜ. 13 ರಿಂದ 16 ರ ತನಕ ದೆಹಲಿಯಲ್ಲಿ 1600 ರೇಟೆಡ್ ಒಳಗಿನವರಿಗೆ ಅಖಿಲ ಭಾರತ ಚೆಸ್ ಫೆಡರೇಶನ್ ಆಯೋಜಿಸುತ್ತಿರುವ ಅಂತರ್ ರಾಷ್ಟ್ರೀಯ ಚೆಸ್ ಸ್ಪರ್ಧೆಯಲ್ಲಿ ಪ್ರಶಾಂತ್ ಭಾಗವಹಿಸಲಿದ್ದಾರೆ.

ಇದೇ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಅವನೀಶ್ ಅವರು ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಇಬ್ಬರು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದು ಕಾಲೇಜಿಗೆ ಹೆಮ್ಮೆಯ ವಿಚಾರವಾಗಿದೆ.

ಪ್ರಶಾಂತ್ ಜೆ ನಾಯ್ಕ ಅವರು ಮೂಲತ: ಉತ್ತರ ಕನ್ನಡದ ಕುಮಟಾದವರಾಗಿದ್ದು, ಜಗದೀಶ್ ನಾಯ್ಕ ಮತ್ತು ಉಮಾ ನಾಯ್ಕ ದಂಪತಿಯ ಪುತ್ರ. ಪ್ರಸ್ತುತ ಪುತ್ತೂರು ತಾಲ್ಲೂಕಿನ ಅರಿಯಡ್ಕ ಗ್ರಾಮದ ಶೇಖಮಲೆ ನಿವಾಸಿ. ಪ್ರಶಾಂತ್ ಅವರು ಸತ್ಯಪ್ರಸಾದ್ ಕೋಟೆ ಅವರಲ್ಲಿ ಚೆಸ್ ತರಬೇತಿ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ ಗಳಿಸಿದ ಪ್ರಶಾಂತ್ ನಾಯ್ಕ ಅವರನ್ನು ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೊ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿಸೋಜ ಮತ್ತು ಸೌಮ್ಯಲತಾ ಅವರು ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News