ಅಝರ್ ಪ್ರಕರಣದಲ್ಲಿ ಚೀನಾದ ಸಹಕಾರದ ನಿರೀಕ್ಷೆ: ರಾಜನಾಥ್ ಸಿಂಗ್
ಹೊಸದಿಲ್ಲಿ, ಜ.3: ಜೈಶ್-ಎ-ಮುಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್‌ನನ್ನು ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಬೇಕು ಎಂಬ ಭಾರತದ ನಿಲುವಿಗೆ ಚೀನಾ ಸಹಮತ ವ್ಯಕ್ತಪಡಿಸಲಿದೆ ಎಂಬ ವಿಶ್ವಾಸವಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಇಂದಿಲ್ಲಿ ತಿಳಿಸಿದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಝರ್ ಹೆಸರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ನಡೆಸಿದ್ದ ಪ್ರಯತ್ನಕ್ಕೆ ಚೀನಾ ‘ವಿಟೋ’ ಪ್ರಯೋಗಿಸುವ ಮೂಲಕ ತಡೆಯೊಡ್ಡಿತ್ತು. ಭಯೋತ್ಪಾದಕತೆಯ ವಿರುದ್ಧದ ಹೋರಾಟದಲ್ಲಿ ಚೀನಾ ತೋರುತ್ತಿರುವ ದ್ವಿಮುಖ ಧೋರಣೆಗೆ ಇದು ಉದಾಹರಣೆ ಎಂದು ಭಾರತ ಪ್ರತಿಕ್ರಿಯಿಸಿತ್ತು.
ತಾನು ಈ ಪ್ರಸ್ತಾವನೆಯನ್ನು ನಿರಂತರ ಮಂಡಿಸುವುದಾಗಿ ಭಾರತ ತಿಳಿಸಿದ್ದು , ಭೀತಿವಾದಿಗಳ ಹಿಂಸಾಕೃತ್ಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಎಲ್ಲಾ ಲಭ್ಯ ಆಯ್ಕೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ರಾಜನಾಥ್ ತಿಳಿಸಿದ್ದಾರೆ. ಅಝರ್ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯ ರಾಷ್ಟ್ರಗಳಲ್ಲಿ ಬಹುಮತಾಭಿಪ್ರಾಯದ ಕೊರತೆಯಿದೆ ಎಂದು ಕಾರಣ ನೀಡಿ ಭಾರತ ಸತತ ಪ್ರಸ್ತಾವನೆಯನ್ನು ಚೀನಾ ನಿರಾಕರಿಸುತ್ತಾ ಬಂದಿದೆ.
ವಿಶ್ವಸಂಸ್ಥೆಯ ಭಯೋತ್ಪಾದಕ ದೃಷ್ಟಿಯಲ್ಲಿ ಸೇರ್ಪಡೆಗೊಂಡರೆ ಅಝರ್ ಹೊಂದಿರುವ ಎಲ್ಲಾ ಆಸ್ತಿಗನ್ನು ತಡೆಹಿಡಿಯಲಾಗುತ್ತದೆ ಮತ್ತು ಪಾಕ್ ಸೇರಿದಂತೆ ಎಲ್ಲಾ ದೇಶಗಳಲ್ಲೂ ಈತ ಸಂಚರಿಸುವುದನ್ನು ನಿಷೇಧಿಸಲಾಗುವುದು.
ವಿಶ್ವಸಂಸ್ಥೆಯ 15 ರಾಷ್ಟ್ರಗಳ ಭದ್ರತಾ ಸಮಿತಿಯಲ್ಲಿ ಚೀನಾ ಹೊರತುಪಡಿಸಿ ಉಳಿದೆಲ್ಲಾ 14 ರಾಷ್ಟ್ರಗಳೂ ಭಾರತದ ಪ್ರಸ್ತಾವನೆಗೆ ಬೆಂಬಲ ಸೂಚಿಸಿದೆ.