×
Ad

ವೈರಲ್ ವೀಡಿಯೊ : ವಿಪಕ್ಷ ನಾಯಕನೊಂದಿಗೆ ಮೇಘಾಲಯ ಸಿಎಂ ಗಾನ!

Update: 2017-01-03 20:22 IST

ಹೊಸದಿಲ್ಲಿ: ಇಂದಿನ ರಾಜಕೀಯ ದ್ವೇಷಮಯ ವಾತಾವರಣ ಎಷ್ಟಿದೆ ಎಂದರೆ, ಆಡಳಿತ ಹಾಗೂ ವಿರೋಧ ಪಕ್ಷದ ಮುಖಂಡರು ಜತೆಗೆ ಸೇರಿ ನಕ್ಕರೂ ಮುಖಪುಟ ಸುದ್ದಿಯಾಗುತ್ತದೆ. ಬದ್ಧ ರಾಜಕೀಯ ವೈರಿಗಳು ಪರಸ್ಪರ ಜತೆಗೆ ನಕ್ಕು ನಲಿಯುತ್ತಾರೆ ಎಂದರೆ ನಂಬುವುದೂ ಅಸಾಧ್ಯ. ಆದರೆ ಶಿಲ್ಲಾಂಗ್‌ನಲ್ಲಿ ಇದು ನಿಜವಾಗಿದೆ.

ಮೇಘಾಲಯ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ವಿರೋಧ ಪಕ್ಷದ ನಾಯಕ ಡಾ.ಡೊಂಕುಪಾರ್ ರಾಯ್ ಹಾಗೂ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ ಕಾರ್ಯಾಧ್ಯಕ್ಷ ಪಾಲ್ ಲಿಂಗ್ಡೊ ಅವರು ಜತೆಯಾಗಿ ಹಾಡಿ, ಕುಣಿದು ಕುಪ್ಪಳಿಸಿದ ದೃಶ್ಯವನ್ನು ಸೆರೆಹಿಡಿದ ಎರಡು ನಿಮಿಷಗಳ ವೀಡಿಯೊ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಗ್ಮಾ ಅವರ ಹಿರಿಮಗಳ ವಿವಾಹದ ವೇಳೆ ಜತೆಯಾಗಿ ಹಾಡಿ ಕುಣಿದಿರುವುದನ್ನು ಬೀಟಲ್ಸ್ ಕ್ಲಾಸಿಕ್ ಆಲ್ ಮೈ ಲವಿಂಗ್ ವೀಡಿಯೊ ಸೆರೆಹಿಡಿದಿದೆ. ದೇಶದ ಶಿಲಾ ರಾಜಧಾನಿ ಎನಿಸಿಕೊಂಡ ಶಿಲ್ಲಾಂಗ್‌ನಲ್ಲಿ ಈ ವಿಶಿಷ್ಟ ಸಂಭ್ರಮದಲ್ಲಿ ಪರಸ್ಪರ ಬದ್ಧ ರಾಜಕೀಯ ವಿರೋಧಿಗಳು ಸೇರಿಕೊಂಡು ಇಡೀ ಸಮಾರಂಭಕ್ಕೆ ಕಳೆಗಟ್ಟಿದರು. ಖ್ಯಾತ ಹಾಡುಗಾರರಾಗಿರುವ ಸಂಗ್ಮಾ ಕಾಲೇಜು ಬ್ಯಾಂಡ್‌ನಲ್ಲೂ ಸ್ಥಾನ ಪಡೆದಿದ್ದರು. ಕೊಲ್ಕತ್ತಾದಲ್ಲಿ ಮೇಘಾಲಯ ಹೌಸ್ ಉದ್ಘಾಟನಾ ಸಮಾರಂಭದಲ್ಲಿ ಹಾಡುವ ಮೂಲಕ 2015ರಲ್ಲಿ ಅಪಾರ ಜನಮೆಚ್ಚುಗೆ ಪಡೆದಿದ್ದರು.

ಲಿಂಗ್ಡೊ ಕವಿಯೂ ಆಗಿದ್ದು, ಜನಪ್ರಿಯ ಬ್ಯಾಂಡ್‌ನ ಸಕ್ರಿಯ ಸದಸ್ಯರೂ ಹೌದು. ಇವರ ಬ್ಯಾಂಡ್‌ಗೆ ಶ್ರೋತೃಗಳು ಕಿಕ್ಕಿರಿದು ಸೇರಿರುತ್ತಾರೆ. ಇದೀಗ ಪರಸ್ಪರ ವಿರುದ್ಧ ದ್ರುವಗಳು ಒಟ್ಟು ಸೇರಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನ, ಸಂಗೀತ ಜನರನ್ನು ಒಗ್ಗೂಡಿಸಬಲ್ಲದು ಎಂದು ವಿಶ್ಲೇಷಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News