ವಿಚ್ಛಿದ್ರಕ ತಂತ್ರಜ್ಞಾನದ ಬಗ್ಗೆ ವಿಜ್ಞಾನಿಗಳು ಜಾಗರೂಕರಾಗಿರಬೇಕು: ಮೋದಿ
ತಿರುಪತಿ, ಜ.3: ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮೂಲಭೂತ ವಿಜ್ಞಾನದಿಂದ ಅನ್ವಯಿಕ ವಿಜ್ಞಾನದವರೆಗೆ ವಿಜ್ಞಾನದ ವಿವಿಧ ಕ್ಷೇತ್ರಗಳಿಗೆ ನೆರವು ನೀಡುವ ಸರಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ವಿಚ್ಛಿದ್ರಕ ತಂತ್ರಜ್ಞಾನದ ಬಗ್ಗೆ ವಿಜ್ಞಾನಿಗಳು ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು.
ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 104ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಸೈಬರ್- ಬೌತಿಕ ವ್ಯವಸ್ಥೆಯಲ್ಲಿ ಕ್ಷಿಪ್ರ ಜಾಗತಿಕ ಬೆಳವಣಿಗೆಯ ಬಗ್ಗೆ ಗಮನ ಹರಿಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಕಾರ್ಯ ಸಾಗಬೇಕಿದೆ ಎಂದರು. ಈ ಕ್ಷೇತ್ರದಲ್ಲಿ ಅಭೂತಪೂರ್ವ ಸವಾಲುಗಳಿವೆ ಎಂದ ಅವರು, ಆದರೆ ಈ ಸವಾಲುಗಳನ್ನು ಸಂಶೋಧನೆ, ತರಬೇತಿ, ರೊಬೊಟಿಕ್ ತಂತ್ರಜ್ಞಾನ, ಡಿಜಿಟಲ್ ಉತ್ಪಾದನೆ, ದತ್ತಾಂಶಗಳ ವಿಶ್ಲೇಷಣೆ, ಆಳವಾದ ಅಧ್ಯಯನ, ಅಂತರ್ಜಾಲದ ಬಳಕೆ.. ಇತ್ಯಾದಿಗಳ ಮೂಲಕ ಅವಕಾಶಗಳನ್ನಾಗಿ ಬದಲಾಯಿಸಲು ನಮಗೆ ಸಾಧ್ಯವಿದೆ ಎಂದರು.
ಈ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಹಾಗೂ ಸೇವೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ , ಕೃಷಿ, ಇಂಧನ, ಸಂಚಾರ ನಿರ್ವಹಣೆ, ಆರೋಗ್ಯ, ಪರಿಸರ, ಭದ್ರತೆ, ಮೂಲಭೂತ ಸೌಕರ್ಯ ವ್ಯವಸ್ಥೆ , ಆರ್ಥಿಕ ವ್ಯವಸ್ಥೆ, ಅಪರಾಧ ಕೃತ್ಯ ನಿಯಂತ್ರಣ ಮುಂತಾದ ವಲಯಗಳಲ್ಲಿ ಬಳಸಿಕೊಳ್ಳುವ ಅಗತ್ಯವಿದೆ. ಪ್ರಮುಖ ವಲಯಗಳಾದ ಶುದ್ಧ ನೀರು ಮತ್ತು ಇಂಧನ, ಆಹಾರ, ಪರಿಸರ, ಹವಾಮಾನ, ಭದ್ರತೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಸವಾಲು ಎದುರಾಗಿದ್ದು ಸರಕಾರ ಈ ಸವಾಲನ್ನು ಎದುರಿಸಲು ಸಂಕಲ್ಪತೊಟ್ಟಿದೆ ಎಂದರು. ಶೈಕ್ಷಣಿಕ , ಕೈಗಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಿಗೆ ನೆರವಾಗುವ ಉತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಮೂಲಸೌಕರ್ಯಗಳನ್ನು ಒದಗಿಸಿಕೊಡುವುದು ತಮ್ಮ ಸರಕಾರದ ಆದ್ಯತೆಯಾಗಿದೆ ಎಂದ ಅವರು, ವಿಜ್ಞಾನ ಸಂಸ್ಥೆಗಳು ಅನವಶ್ಯಕ ಮತ್ತು ವೆಚ್ಚದಾಯಕ ವೈಜ್ಞಾನಿಕ ಉಪಕರಣಗಳ ಸಮಸ್ಯೆಯ ಬಗ್ಗೆ ಗಮನ ನೀಡಬೇಕು ಎಂದರು.
ವೃತ್ತಿಪರವಾಗಿ ನಿರ್ವಹಿಸಲ್ಪಡುವ ಬೃಹತ್ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯದ ಕುರಿತು ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಮೋದಿ ತಿಳಿಸಿದರು.