×
Ad

ಹುತಾತ್ಮ ಉಧಮ ಸಿಂಗ್ ಮರಿಮೊಮ್ಮಗನಿಂದ ಜವಾನನ ಉದ್ಯೋಗಕ್ಕಾಗಿ ಧರಣಿ

Update: 2017-01-03 21:48 IST

ಹೊಸದಿಲ್ಲಿ,ಜ.3: ದೇಶಕ್ಕಾಗಿ ಬಲಿದಾನಗೈದ ಹುತಾತ್ಮ ಉಧಮ ಸಿಂಗ್ ಅವರ ಮರಿಮೊಮ್ಮಗ ಜಗ್ಗಾ ಸಿಂಗ್ ಹತ್ತು ವರ್ಷಗಳ ಹಿಂದೆ ಆಗಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತನಗೆ ಭರವಸೆ ನೀಡಿದ್ದ ಜವಾನನ ಹುದ್ದೆಯನ್ನು ಪಡೆದುಕೊಳ್ಳಲು ಇನ್ನೂ ಹೋರಾಟ ನಡೆಸುತ್ತಿದ್ದಾನೆ. ಸರಕಾರಿ ಉದ್ಯೋಗದ ಭರವಸೆ ನೀಡಿದ ಕಾಂಗ್ರೆಸ್ ಸರಕಾರ ಕಳೆದ ಹತ್ತು ವರ್ಷಗಳಿಂದಲೂ ರಾಜ್ಯದಲ್ಲಿ ಅಧಿಕಾರದಲ್ಲಿಲ್ಲ. ಆಡಳಿತ ನಡೆಸುತ್ತಿರುವ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಸಮ್ಮಿಶ್ರ ಸರಕಾರವೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

 ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ರಾಜನಾಥ ಸಿಂಗ್ ಅವರಿಗೆ ಪತ್ರಗಳನ್ನು ಬರೆಯುವ ಮೂಲಕ ಅವರ ಗಮನವನ್ನೂ ಸೆಳೆಯಲು ಜಗ್ಗಾಸಿಂಗ್ ಪ್ರಯತ್ನಿಸುತ್ತಿದ್ದಾನೆ. ರಾಜಧಾನಿಯಲ್ಲಿನ ಅಧಿಕಾರದ ಮೊಗಸಾಲೆಯಾದರೂ ತನ್ನ ಅಹವಾಲನ್ನು ಅಲಿಸಬಹುದು ಎಂಬ ಆಶಯದೊಡನೆ ಆತ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ತನ್ನ ಪ್ರತಿಭಟನೆಯನ್ನು ದಿಲ್ಲಿಯ ಜಂತರ್ ಮಂತರ್‌ಗೆ ವರ್ಗಾಯಿಸಿದ್ದಾನೆ.

 30ರ ಹರೆಯದ ಜಗ್ಗಾ ಸಿಂಗ್ ಉಧಮ ಸಿಂಗ್ ಅವರ ಹಿರಿಯ ಸೋದರಿ ಆಸ್ ಕೌರ್ ಅವರ ಮರಿಮೊಮ್ಮಗನಾಗಿದ್ದು, ಹತ್ತನೆ ತರಗತಿ ಮುಗಿಸಿದ್ದಾನೆ. ತಿಂಗಳಿಗೆ 2,500 ರೂ.ಸಂಬಳಕ್ಕೆ ಸಂಗೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ದಿನಗೂಲಿ ಕಾರ್ಮಿಕನಾಗಿರುವ ತನ್ನ ತಂದೆ ಜೀತ್ ಸಿಂಗ್(60) ಸೇರಿದಂತೆ ಆರು ಜನರ ಕುಟುಂಬದ ಹೊಣೆ ಹೊತ್ತಿರುವ ಜಗ್ಗಾ ಸಿಂಗ್ ಕಡುಬಡತನದಲ್ಲಿ ಬೇಯುತ್ತಿದ್ದಾನೆ.

 1919,ಎ.13ರಂದು ಜನರಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ನಡೆಸಿದ್ದ ಕುಖ್ಯಾತ ಜಲಿಯನ್‌ವಾಲಾಬಾಗ್ ಹತ್ಯಾಕಾಂಡವನ್ನು ಕಣ್ಣಾರೆ ಕಂಡಿದ್ದ ಉಧಮ ಸಿಂಗ್ 21 ವರ್ಷಗಳ ಬಳಿಕ ಆ ಹತ್ಯಾಕಾಂಡ ನಡೆದಾಗ ಪಂಜಾಬಿನ ಗವರ್ನರ್ ಆಗಿದ್ದ ಮೈಕೇಲ್ ಫ್ರಾನ್ಸಿಸ್ ಒ’ಡ್ವೆಯರ್‌ನನ್ನು ಲಂಡನ್‌ನಲ್ಲಿ ಹತ್ಯೆಗೈದು ಪ್ರತೀಕಾರವನ್ನು ತೀರಿಸಿಕೊಂಡಿದ್ದ. ಕೊಲೆ ಆರೋಪದಲ್ಲಿ ಆತನನ್ನು ಲಂಡನ್ನಿನ ಜೈಲಿನಲ್ಲಿ ನೇಣಿ ಗೇರಿಸಲಾಗಿತ್ತು.

200ರಲ್ಲಿ ಅಮರಿಂದರ್ ಸಿಂಗ್ ಜಗ್ಗಾ ಸಿಂಗ್‌ಗೆ ಸರಕಾರಿ ಉದ್ಯೋಗದ ಭರವಸೆ ನಿಡಿದ್ದರರು. ಆದರೆ ಆ ಭರವಸೆ ಇನ್ನೂ ಭರವಸೆಯಾಗಿಯೇ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News