×
Ad

ಜ.31ರಿಂದ ಸಂಸತ್ತಿನ ಬಜೆಟ್ ಅಧಿವೇಶನ, ಫೆ.1ರಂದು ಬಜೆಟ್ ಮಂಡನೆಗೆ ಶಿಫಾರಸು

Update: 2017-01-03 21:49 IST

ಹೊಸದಿಲ್ಲಿ,ಜ.3: ಬಜೆಟ್ ಪ್ರಕ್ರಿಯೆಯ ಪ್ರಮುಖ ಪರಿಷ್ಕರಣೆಯ ಅಂಗವಾಗಿ ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ(ಸಿಸಿಪಿಎ)ಯು ಸಂಸತ್ತಿನ ಬಜೆಟ್ ಅಧಿವೇಶನದ ಆರಂಭವನ್ನು ಜ.31ಕ್ಕೆ ಹಿಂದೂಡಿಕೆ ಮತ್ತು ಫೆ.1ರಂದು ಬಜೆಟ್ ಮಂಡನೆಗೆ ಶಿಫಾರಸು ಮಾಡಿದೆ.

ರಾಷ್ಟ್ರಪತಿಗಳ ಭಾಷಣ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಮಂಡನೆ ಇವೆರಡೂ ಜ.31ರಂದೇ ನಡೆಯುವ ಸಾಧ್ಯತೆಯಿದೆ. ಬಜೆಟ್ ಅಧಿವೇಶನದ ಮೊದಲ ಹಂತವು ಫೆ.9ರವರೆಗೆ ನಡೆಯಲಿದೆ.

ಇಂದಿಲ್ಲಿ ಸಭೆ ಸೇರಿದ ಗೃಹಸಚಿವ ರಾಜನಾಥ ಸಿಂಗ್ ನೇತೃತ್ವದ ಸಿಸಿಪಿಎ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರಿಗೆ ಈ ಶಿಫಾರಸುಗಳನ್ನು ಮಾಡಿತು. ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್, ಕಾನೂನು ಸಚಿವ ರವಿಶಂಕರ ಪ್ರಸಾದ್, ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರೂ ಸಭೆಯಲ್ಲಿ ಉಪಸ್ಥಿತರಿದ್ದರು.

ಬಜೆಟ್‌ನ್ನು ಮೊದಲೇ ಮಂಡಿಸುವುದರಿಂದ ಇಡೀ ಪ್ರಕ್ರಿಯೆಯನ್ನು ಮಾರ್ಚ್ 31ರೊಳಗೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಾಗೂ ವೆಚ್ಚ ಮತ್ತು ತೆರಿಗೆ ಪ್ರಸ್ತಾವನೆಗಳನ್ನು ಹೊಸ ಆರ್ಥಿಕ ವರ್ಷದ ಆರಂಭದಿಂದಲೇ ಜಾರಿಗೆ ತರಲು ಸಾಧ್ಯವಾಗುತ್ತದೆ. ಇದು ಅವುಗಳ ಉತ್ತಮ ಅನುಷ್ಠಾನವನ್ನು ಖಚಿತಪಡಿಸುತ್ತದೆ.

ಈವರೆಗೆ ಬಜೆಟ್ ಪ್ರಕ್ರಿಯೆಯನ್ನು ಮೇ ಮಧ್ಯಭಾಗದಲ್ಲಷ್ಟೇ ಪೂರ್ಣಗೊಳಿಸಲು ಸಾಧ್ಯವಾಗುತ್ತಿತ್ತು ಮತ್ತು ಜೂನ್‌ನಲ್ಲಿ ಮಳೆಗಾಲ ಆರಂಭವಾಗುವುದರೊಡನೆ ಅಕ್ಟೋಬರ್‌ವರೆಗೂ ಹೆಚ್ಚಿನ ಯೋಜನೆಗಳ ಅನುಷ್ಠಾನ ಮತ್ತು ರಾಜ್ಯಗಳಿಂದ ವೆಚ್ಚ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಯೋಜನೆಗಳ ಅನುಷ್ಠಾನಕ್ಕೆ ಕೇವಲ ಆರು ತಿಂಗಳ ಸಮಯವಿರುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News