×
Ad

ದೇಶ ಅಳುವ ಪ್ರಧಾನಿ ಮೋದಿಯ ಸೋದರರು ಜೀವನೋಪಾಯಕ್ಕೆ ಏನೇನು ಮಾಡುತ್ತಿದ್ದಾರೆ ?

Update: 2017-01-03 21:53 IST

ಹೊಸದಿಲ್ಲಿ, ಜ. 3 : ಭಾರತದಲ್ಲಿ ಸದ್ಯ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವ್ಯಕ್ತಿ ಯಾರು ಎಂದರೆ ಕಣ್ಣು ಮುಚ್ಚಿ ಪ್ರಧಾನಿ ನರೇಂದ್ರ ಮೋದಿ ಎಂದು ಚಿಕ್ಕ ಮಕ್ಕಳು ಬೇಕಾದರೂ ಹೇಳುತ್ತಾರೆ. ಸರ್ಕಾರದ ವಿರುದ್ಧ ಪರ - ವಿರುದ್ಧ ಅಭಿಪ್ರಾಯಗಳೇನೇ ಇದ್ದರೂ ಸುದ್ದಿಯಲ್ಲಿರುವುದರಲ್ಲಿ ಅವರೀಗಲೂ ದೇಶದ ನಂಬರ್ ಒನ್ ನಾಯಕ. ಆದರೆ ಅವರ ಸೋದರರ ಬಗ್ಗೆ ನಿಮಗೆಷ್ಟು ಗೊತ್ತು ಎಂದು ಕೇಳಿದರೆ ಅವರಿಗೆ ಸೋದರರು ಎಷ್ಟು ಎಂಬ ಉತ್ತರವೇ ಹೆಚ್ಚಿನವರಿಂದ ಬರುವ ಸಾಧ್ಯತೆ ಇದೆ. ಏಕೆಂದರೆ ತಮ್ಮ ಸೋದರ ದೇಶವನ್ನು ಅಳುತ್ತಿದ್ದರೂ ಅವರೆಲ್ಲರೂ ಗುಜರಾತಿನಲ್ಲಿ ಯಾವುದೇ ಪ್ರಚಾರ ಬಯಸದೆ ಜನಸಾಮಾನ್ಯರಂತೆ ಬದುಕುತ್ತಿದ್ದಾರೆ. 

ಇಂಡಿಯಾ ಟುಡೇ ಈ ಬಾರಿಯ ತನ್ನ ಸಂಚಿಕೆಯಲ್ಲಿ ಪ್ರಧಾನಿ ಸೋದರರ ಪರಿಚಯ ಪ್ರಕಟಿಸಿದೆ. ಇದರಲ್ಲಿ ದೇಶದ ಜನರು ಈವರೆಗೆ ತಿಳಿದೇ ಇಲ್ಲದ ಹಲವು ಮಹತ್ವದ ಮಾಹಿತಿಗಳು ಇವೆ. ಪ್ರಧಾನಿ ಮೋದಿ ತನ್ನ ತಂದೆಯ ಆರು ಮಕ್ಕಳಲ್ಲಿ ಮೂರನೆಯವರು. 

ಸೋಮ್ ಭಾಯ್ ಮೋದಿ : ಗುಜರಾತಿನಲ್ಲಿ ವೃದ್ಧಾಶ್ರಮವೊಂದನ್ನು ನಡೆಸುತ್ತಿರುವ ಪ್ರಧಾನಿಯ ಸೋದರ ಸೋಮ್ ಭಾಯ್ ಬಗ್ಗೆ ಮೊದಲು ಜನರಿಗೆ ಗೊತ್ತಾಗಿದ್ದು 2015ರಲ್ಲಿ.  ಕಾರ್ಯಕ್ರಮವೊಂದಕ್ಕೆ ಬಂದಾಗ ಅವರು ಹೆಸರು ನೋಡಿದ ಬಳಿಕ ಈ ವಿಷಯ ಬಹಿರಂಗವಾಯಿತು. ಆದರೆ ಸೋಮ್ ಭಾಯ್ ಪ್ರಕಾರ " ಅವರು ನರೇಂದ್ರ ಮೋದಿ ಅವರ ಸೋದರ, ಪ್ರಧಾನ ಮಂತ್ರಿಯ ಸೋದರ ಅಲ್ಲ. ಪ್ರಧಾನಿ ಪಾಲಿಗೆ ದೇಶದ 125 ಕೋಟಿ ಜನರಂತೆ ಅವರೂ ಒಬ್ಬರು. 

ಕಳೆದ ಎರಡೂವರೆ ವರ್ಷಗಳಲ್ಲಿ ಅವರು ಪ್ರಧಾನಿಯನ್ನು ಭೇಟಿಯಾಗಿಲ್ಲ.  ಫೋನ್ ನಲ್ಲಿ ಮಾತ್ರ  ಮಾತನಾಡಿದ್ದಾರೆ. ಅವರ ಚಿಕ್ಕ ತಮ್ಮ ಪಂಕಜ್ ಗುಜರಾತ್ ವಾರ್ತಾ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದು ಅವರ ಜೊತೆಯೇ ತಾಯಿ ಹೀರಾಬೆನ್ ಇರುವುದರಿಂದ ಅವರನ್ನು ಸೋಮ್ ಭಾಯ್ ಆಗಾಗ ಭೇಟಿಯಾಗುತ್ತಾರೆ.
 
ಅಮೃತ್ ಭಾಯ್ ಮೋದಿ : ಖಾಸಗಿ ಕಂಪೆನಿಯೊಂದರಲ್ಲಿ ಫಿಟ್ಟರ್ ಆಗಿ ಉದ್ಯೋಗದಲ್ಲಿದ್ದು 2005 ರಲ್ಲಿ ನಿವೃತ್ತರಾದ ಅಮೃತ್ ಭಾಯ್ ಪ್ರಧಾನಿ ಮೋದಿಯ ಇನ್ನೊಬ್ಬ ಸೋದರ. ನಿವೃತ್ತರಾಗುವಾಗ ಅವರ ಸಂಬಳ 10 ಸಾವಿರ. ಸದ್ಯ ತಮ್ಮ ಪುತ್ರ ಮಧ್ಯಮ ವರ್ಗದ ವ್ಯಾಪಾರಿಯಾಗಿರುವ ಸಂಜಯ್ (47), ಅವರ ಪತ್ನಿ ಹಾಗು ಇಬ್ಬರು ಮಕ್ಕಳೊಂದಿಗೆ ಅಹ್ಮದಾಬಾದ್ ನ ಗಾಡ್ ಲೋಡಿಯ ಎಂಬಲ್ಲಿ ನಾಲ್ಕು ಕೊಠಡಿಯ ಮನೆಯೊಂದರಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿದ್ದಾರೆ. 

ಸಂಜಯ್ ರ ಮಕ್ಕಳು ನೀರವ್ ಹಾಗು ನಿರಾಲಿ ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು. 2009 ರಲ್ಲಿ ಕಾರು ಖರೀದಿಸಿರುವ ಸಂಜಯ್ ಪ್ರಕಾರ ಅವರು ಈವರೆಗೆ ವಿಮಾನದಲ್ಲಿ ಪ್ರಯಾಣಿಸಿಲ್ಲ. 2003 ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ಹಾಗು 2014 ರ ಮೇ 16 ರಂದು ಬಿಜೆಪಿ ಲೋಕಸಭಾ ಚುನಾವಣೆ ಗೆದ್ದಾಗ ಮಾತ್ರ ಅವರು ಮೋದಿಯನ್ನು ಅವರು ಭೇಟಿ ಮಾಡಿದ್ದಾರೆ. 

ಪ್ರಹ್ಲಾದ್ ಮೋದಿ (64) : ಇವರು ಪ್ರಧಾನಿ ಮೋದಿಗಿಂತ ಚಿಕ್ಕವರು ಹಾಗು ಗುಜರಾತ್ ನಲ್ಲಿ ನ್ಯಾಯಬೆಲೆ ಅಂಗಡಿ ಮಾಲಕರ ಸಂಘದ ಅಧ್ಯಕ್ಷರು. ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆ ತರಲು ಒಂದು ಅಭಿಯಾನ ಪ್ರಾರಂಭಿಸಿದ್ದರು. ಇದನ್ನು ಸೋದರ ಪ್ರಹ್ಲಾದ್ ವಿರೋಧಿಸಿದ್ದರು. 

ಇವರಲ್ಲದೆ  ಪ್ರಧಾನಿ ಮೋದಿಯ ಇತರ ಸೋದರರು, ಸೋದರರ ಮಕ್ಕಳು ಕೂಡ ಸಾಮಾನ್ಯರಂತೆ ಜೀವಿಸುತ್ತಿದ್ದಾರೆ. 
ಪ್ರಧಾನಿಯ ಚಿಕ್ಕಪ್ಪ ನರಸಿಂಹ ದಾಸ್ ಅವರ ಪುತ್ರ  ಅಶೋಕ್ ಭಾಯ್ ಅವರು ವಡ್ನಗರದ ಧಿಕಾಂತ ಬಝಾರ್ ನಲ್ಲಿ ಚಿಕ್ಕ ಅಂಗಡಿಯೊಂದನ್ನು ಇತ್ತು ಗಾಳಿಪಟ , ಪಟಾಕಿ ಹಾಗು ತಿಂಡಿಗಳನ್ನು ಮಾರುತ್ತಾರೆ. ಅಶೋಕ್ ಅವರ ಭರತ್ ಭಾಯ್ ವಡ್ನಗರದಿಂದ 60 ಕಿಮೀ ದೂರದ ಪಾಲನ್ ಪುರದ ಸಮೀಪ ಲಾಲ್ ವಾಡಾ ಎಂಬಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಪತ್ನಿ ರಮೀಳಾ ಬೆನ್ ಚಿಕ್ಕಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಾರೆ. 

ಭರತ್ ಭಾಯ್ ಅವರಿಗಿಂತ ಚಿಕ್ಕವರಾದ ಚಂದ್ರಕಾಂತ್ ಭಾಯ್ ಅಹ್ಮದಾಬಾದ್ ನ ಒಂದು ದತ್ತಿ ಗೋಶಾಲೆಯಲ್ಲಿ ಸಹಾಯಕರಾಗಿದ್ದಾರೆ. ಇವರ ಇನ್ನೊಬ್ಬ ಸೋದರ ಅರವಿಂದ್ ಭಾಯ್ ಗುಜರಿ ವ್ಯಾಪಾರಿಯಾಗಿದ್ದಾರೆ. ಇವರು ವಡ್ನಗರದಲ್ಲಿ ಮನೆ ಮನೆ ಸುತ್ತಿ ಹಳೆ ಟಿನ್ ಹಾಗು ರದ್ದಿ ಸಂಗ್ರಹಿಸುತ್ತಾರೆ. ಇವರೆಲ್ಲರ ಹಿರಿಯ ಸೋದರ ಭೋಗಿ ಭಾಯ್ ವಡ್ನಗರದಲ್ಲಿ ಒಂದು ದಿನಸಿ ಅಂಗಡಿ ನಡೆಸುತ್ತಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News