ಉಡುಪಿ : ನಾಟಕ ಜಾನಪದ ನೃತ್ಯ ಸ್ಪರ್ಧೆ ಉದ್ಘಾಟನೆ
ಉಡುಪಿ, ಜ.3: ರಂಗಭೂಮಿ ಚಳವಳಿಯು ನಾಟಕ ನೋಡುವ ಒಂದು ಸೀಮಿತ ವಲಯವನ್ನು ಮಾತ್ರ ಸೃಷ್ಟಿಸಿಕೊಂಡಿದೆ. ನಾಟಕದ ವಿಚಾರ, ಧೋರಣೆಗಳನ್ನು ರಂಗಾಸಕ್ತರು ಮಾತ್ರ ಅರ್ಥೈಸಿಕೊಳ್ಳುವ ಮಟ್ಟಕ್ಕೆ ತಂದು ನಿಲ್ಲಿಸಲಾಗಿದೆ. ಜನಸಾಮಾನ್ಯರು ಅದನ್ನು ಅರ್ಥೈಸಲು ಸಾಧ್ಯವಿಲ್ಲ. ನಾಟಕ ಹಿಂದೆ ಬೌದ್ಧಿಕ ಚಿಂತನೆ ಇರುವುದರಿಂದ ವಿದ್ಯಾರ್ಥಿಗಳನ್ನು ಇದರಲ್ಲಿ ಭಾಗಿಗಳನ್ನಾಗಿ ಮಾಡಬೇಕಾದ ಅಗತ್ಯವಿದೆ. ಇದರಿಂದ ರಂಗಭೂಮಿ ಬೆಳವಣಿಗೆ ಸಾಧ್ಯ ಎಂದು ಹಿರಿಯ ರಂಗಕರ್ಮಿ ಗುರುರಾಜ್ ಮಾರ್ಪಳ್ಳಿ ಹೇಳಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ರಂಗಾಯಣ ಮೈಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇವುಗಳ ಸಹಯೋಗ ದೊಂದಿಗೆ ಉಡುಪಿ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಅಂತರ್ ಕಾಲೇಜು ನಾಟಕ ಹಾಗೂ ಜಾನಪದ ನೃತ್ಯ ಸ್ಪರ್ಧೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ರಂಗಭೂಮಿಯಲ್ಲಿ ಪ್ರಬುದ್ಧ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತೊಡಗಿಸಿ ಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ರಂಗಭೂಮಿಯಲ್ಲಿ ಗಂಭೀರ ಅಧ್ಯಯನ ನಡೆಸಬಹುದು. ಎಡಪಂಥೀಯ, ಬಲಪಂಥೀಯ ಹಾಗೂ ಸಮಗ್ರ ದೃಷ್ಠಿಯಿಂದಲೂ ರಂಗಭೂಮಿ ಬೆಳೆದು ನಿಂತಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಮೇಶ್ ಸಾಲಿಯಾನ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿ.ಗಣೇಶ್ ಕೊರಗ, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿ ಕುಮಾರ್ ಸ್ವಾಗತಿಸಿದರು.
ಸ್ಪರ್ಧೆಯ ಜಿಲ್ಲಾ ಸಂಚಾಲಕ ಪ್ರವೀಣ್ ಜಿ. ಕೊಡವೂರು ವಂದಿಸಿದರು. ದಯಾನಂದ ಉಪ್ಪೂರು ಕಾರ್ಯಕ್ರಮ ನಿರೂಪಿಸಿದರು.