ಬೆಳ್ಮ ಪೆಳತ್ತಡಿ "ಸೇವಾಶ್ರಮ"ದ ಸಂಪರ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ
ಕೊಣಾಜೆ , ಜ.3 : ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವೇಚನಾ ನಿಧಿಯಿಂದ ಬೆಳ್ಮ ಗ್ರಾಮದ ಪೆಳತ್ತಡಿ ಸೇವಾಶ್ರಮ ರಸ್ತೆಯು ಕಾಂಕ್ರಿಟೀಕರಣಗೊಳ್ಳಲಿದ್ದು ಕಾಮಗಾರಿಗೆ ಮಂಗಳವಾರದಂದು ಶಿಲಾನ್ಯಾಸವನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿವಿಧ ಹೆಸರಿನ ಆಶ್ರಮಗಳು ಸಮಾಜಕ್ಕೆ ತಮ್ಮದೇ ಆದ ವಿಶೇಷ ಸೇವೆಯನ್ನು ನೀಡುತ್ತಿರುವಾಗ ಜನಪ್ರತಿನಿಧಿಗಳು ಆಶ್ರಮಗಳಿಗೆ ಬೇಕಾದ ರಸ್ತೆ,ಕನಿಷ್ಠ ಮೂಲಭೂತ ಸೌಕರ್ಯಗಳನ್ನಾದರೂ ಒದಗಿಸುವ ಪ್ರಾಮಾಣಿಕ ಕಾರ್ಯ ನಡೆಸಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ , ಕಳೆದ ಬಾರಿ ಸ್ವಾತಂತ್ರ್ಯೋತ್ಸವದಂದು ಸೇವಾಶ್ರಮಕ್ಕೆ ಭೇಟಿ ನೀಡಿದ್ದ ವೇಳೆ ಆಶ್ರಮದ ಟ್ರಸ್ಟಿಗಳು ರಸ್ತೆ ನಿರ್ಮಿಸಲು ಕೇಳಿಕೊಂಡಿದ್ದರು. ಪ್ರದೇಶವು ತನ್ನ ಕ್ಷೇತ್ರಕ್ಕೆ ಒಳಪಡದಿದ್ದರೂ ಸಹ ಇಲ್ಲಿನ ಜಿ.ಪಂ ಸದಸ್ಯೆ ರಶೀದಾ ಬಾನು ಅವರ ಸಹಕಾರದಿಂದ ಜಿ.ಪಂ ಅಧ್ಯಕ್ಷರಲ್ಲಿ ಸಮಸ್ಯೆಯನ್ನು ಮನವರಿಸಿದಾಗ ಅವರು ತಮ್ಮ ವಿವೇಚನಾ ನಿಧಿಯಿಂದಲೇ ಅನುದಾನ ನೀಡಿದ್ದು ತುಂಬಾನೇ ಸಂತಸ ತಂದಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಗ್ರಾಮ ಸಮಿತಿ ಬಿಜೆಪಿ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ, ಸೇವಾಶ್ರಮದ ಟ್ರಸ್ಟಿಗಳಾದ ಹರೀಶ್ ಆಳ್ವ,ದೇವದಾಸ್, ಜಿ.ಆರ್.ಶೆಟ್ಟಿ, ಗೀತಾ ಆರ್ ಶೆಟ್ಟಿ, ಸ್ಥಳೀಯ ಮುಖಂಡ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.