ಪೀಠೋಪಕರಣದ ಅಡಿಗೆ ಸಿಲುಕಿದ ತನ್ನ ಅವಳಿ ಸೋದರನನ್ನು ರಕ್ಷಿಸಿದ ಎರಡು ವರ್ಷದ ಮಗು!

Update: 2017-01-03 17:47 GMT

ಕೋಲ್ಕತಾ,ಜ.3: ಹಿರೋಗಿರಿಯನ್ನು ವಯಸ್ಸು ಅಥವಾ ಎತ್ತರದ ಮೂಲಕ ವ್ಯಾಖ್ಯಾನಿಸಲಾಗುವುದಿಲ್ಲ. ಈ ಮಾತಿಗೆ ಇಲ್ಲಿರುವ ವೀಡಿಯೊವೇ ಸಾಕ್ಷಿ. ಎರಡು ವರ್ಷ ಪ್ರಾಯದ ಬೌಡಿ ಷ್ರಾಫ್ ಬಟ್ಟೆಗಳು ತುಂಬಿದ್ದ ಭಾರೀ ಗಾತ್ರದ ಕಪಾಟಿನಡಿ ಸಿಲುಕಿದ್ದ ತನ್ನ ಅವಳಿ ಸೋದರ ಬ್ರಾಕ್ ಷ್ರಾಫ್‌ನನ್ನು ರಕ್ಷಿಸಿದ ವೀಡಿಯೋ ವೈರಲ್ ಆದ ಬಳಿಕ ಇಂಟರ್‌ನೆಟ್‌ನಲ್ಲಿ ಧೈರ್ಯಕ್ಕೆ ಹೊಸ ದ್ಯೋತಕವಾಗಿ ಮೂಡಿ ಬಂದಿದ್ದಾನೆ.

ಈ ಪುಟ್ಟ ಪೋರ ತನ್ನ ಸೋದರನಿಗೆ ಯಾವುದೇ ಗಾಯವಾಗದಂತೆ ಆತನನ್ನು ರಕ್ಷಿಸಿ ತನ್ನ ಸಮಯಪ್ರಜ್ಞೆಯನ್ನು ಮೆರೆದಿದ್ದಾನೆ. ಈ ಘಟನೆ ನಡೆದಾಗ ಹೆತ್ತವರು ಮನೆಯಲ್ಲಿರಲಿಲ್ಲ. ಭಾರೀ ಗಾತ್ರದ ಕ್ಯಾಬಿನೆಟ್ ಏಕಾಏಕಿ ಉರುಳಿಬಿದ್ದಾಗ ಬೌಡಿ ಜೊತೆ ಆಟವಾಡಿಕೊಂಡಿದ್ದ ಬ್ರಾಕ್ ಅದರ ಕೆಳಗೆ ಸಿಲುಕಿದ್ದ. ಆತನ ಕುತ್ತಿಗೆ ಮತ್ತು ಪಕ್ಕೆಲವುಗಳು ಯಾವುದೇ ಸಂದರ್ಭದಲ್ಲಿಯೂ ಜಖಂಗೊಳ್ಳುವ ಸಾಧ್ಯತೆಗಳಿದ್ದವು.

ವೀಡಿಯೊದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಮೊದಲ ನೋಟಕ್ಕೆ ನಂಬಲು ಸಾಧ್ಯವೇ ಇಲ್ಲ. ಬೌಡಿ ವಿವಿಧ ಕೋನಗಳಿಂದ ಕ್ಯಾಬಿನೆಟ್‌ನ್ನು ಎತ್ತಲು,ತಳ್ಳಲು ಪ್ರಯತ್ನಿಸಿದ ಅಸಾಮಾನ್ಯ ದೃಶ್ಯಗಳು ಈ ವೀಡಿಯೊದಲ್ಲಿವೆ. ಕೊನೆಗೂ ಬೌಡಿ ತನ್ನ ಸೋದರನನ್ನು ಅತ್ಯಂತ ಸುರಕ್ಷಿತವಾಗಿ ಕ್ಯಾಬಿನೆಟ್‌ನ ಅಡಿಯಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಬೆಡ್‌ರೂಮ್‌ನಲ್ಲಿ ಅಳವಡಿಸಲಾಗಿರುವ ಭದ್ರತಾ ಕ್ಯಾಮೆರಾ ಈ ಪೋರನ ಸಾಹಸವನ್ನು ಚಿತ್ರೀಕರಿಸಿದೆ. ಟೆರೇಸ್‌ನಲ್ಲಿದ್ದ ತಾಯಿ ರೆಗ್ ಕೆಳಗಿಳಿದು ಬಂದಾಗ ಇಂತಹುದೊಂದು ಘಟನೆ ನಡೆದಿರಬಹುದು ಎನ್ನುವುದು ಆಕೆಯ ಕಲ್ಪನೆಗೂ ನಿಲುಕಿರಲಿಲ್ಲ. ಕ್ಯಾಬಿನೆಟ್‌ನ್ನು ಎತ್ತಿ ಸ್ವಸ್ಥಾನದಲ್ಲಿರಿಸಿದ ಆಕೆ ಬಳಿಕ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ಕಂಡು ದಂಗುಬಡಿದು ಹೋಗಿದ್ದಳು.
ಮಕ್ಕಳ ತಂದೆ ರಿಕಿ ಷ್ರಾಫ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಪ್‌ಲೋಡ್ ಮಾಡಿರುವ ಈ ವೀಡಿಯೊ ವೈರಲ್ ಆಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News