ಟಿಬೆಟಿಯನ್ನರ ಭಾರತ ಪ್ರವೇಶಕ್ಕೆ ನಿಷೇಧ ಹೇರಿದ ಚೀನಾ
ಬೀಜಿಂಗ್, ಜ.4 : ಕಾಲಚಕ್ರ ಪ್ರವಚನಗಳಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡುವ ಉದ್ದೇಶ ಹೊಂದಿರುವ ಟಿಬೆಟಿಯನ್ನರ ಭಾರತ ಪ್ರವೇಶದ ಮೇಲೆ ಚೀನಾ ಸರಕಾರ ನಿರ್ಬಂಧ ಹೇರಿದೆಯೆಂದು ತಿಳಿದು ಬಂದಿದೆ.
ಕಳೆದ ವರ್ಷದ ನವೆಂಬರ್ ತಿಂಗಳಿಂದ ಟಿಬೆಟಿಯನ್ನರ ಪಾಸ್ ಪೋರ್ಟ್ ಗಳನ್ನು ಚೀನಾ ಸರಕಾರ ವಶಕ್ಕೆ ಪಡೆದುಕೊಳ್ಳುತ್ತಿದೆಯೆಂಬ ಸುದ್ದಿಯಿದೆ. ನೇಪಾಳಿ ಮಾಧ್ಯಮದ ವರದಿಗಳಂತೆ ನೇಪಾಳ ಭೇಟಿ ಮೇಲೂ ಚೀನೀಯರಿಗೆ ನಿರ್ಬಂಧ ಹೇರಲಾಗಿದೆಯಲ್ಲದೆ ಜನವರಿ 10ರ ತನಕದ ಎಲ್ಲಾ ಪ್ರವಾಸಗಳನ್ನು ಹಾಗೂ ಬುಕ್ಕಿಂಗುಗಳನ್ನು ಕೂಡಲೇ ರದ್ದುಪಡಿಸುವಂತೆ ಟ್ರಾವೆಲ್ ಏಜನ್ಸಿಗಳಿಗೆ ಹಾಗೂ ಏರ್ ಲೈನ್ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ.
ದಲಾಯಿ ಲಾಮ ಅವರು ತಮ್ಮ ಕಾಲಚಕ್ರ ಪ್ರವಚನಗಳನ್ನು ಆರಂಭಿಸುವ ಮೊದಲು ಎಲ್ಲರೂ ಟಿಬೆಟ್ ಗೆ ಹಿಂದಿರುಗಬೇಕೆಂದು ಚೀನಾ ಸರಕಾರ ಆದೇಶಿಸಿದೆಯೆನ್ನಲಾಗಿದೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ದಲಾಯಿ ಲಾಮ ಅವರು ಈಗಾಗಲೇ ಟಿಬೆಟಿಯನ್ ಯಾತ್ರಿಕರನ್ನುದ್ದೇಶಿಸಿ ಧರ್ಮಸಾಲ, ದಿಲ್ಲಿ ಹಾಗೂ ಬೋಧ್ ಗಯಾದಲ್ಲಿ ಮಾತನಾಡಿ ಎದೆಗುಂದದಂತೆ ಅವರಿಗೆ ಸಲಹೆ ನೀಡಿದ್ದಾರೆ.
ಜನವರಿ 14ರವರೆಗೆ ನಡೆಯುವ ಕಾಲಚಕ್ರ ಪ್ರವಚನದ ಅನ್ವಯ ಭಕ್ತರು ಟಿಬೆಟಿನಲ್ಲಿದ್ದುಕೊಂಡೇ ಪ್ರಾರ್ಥಿಸಬಹುದು ಎಂದು ಅವರು ಹೇಳಿದ್ದಾರೆ. ಈ ಕಾಲಚಕ್ರ ಪ್ರವಚನಕ್ಕೆ ಆಗಮಿಸ ಬಯಸುವ ಚೀನೀ ಬೌದ್ಧರೂ ಹಲವರಿದ್ದಾರೆ ಎಂದು ಹೇಳಿರುವ ದಲಾಯಿ ಲಾಮ ತಮ್ಮ ಪ್ರಾರ್ಥನೆಯ ಸಂದರ್ಭ ಟಿಬೆಟಿಯನ್ನರ ಜತೆ ತಾವು ಅವರನ್ನೂ ನೆನೆಯುವುದಾಗಿ ಹೇಳಿದ್ದಾರೆ.
34ನೆ ಕಾಲಚಕ್ರ ಕೈಂಕರ್ಯವನ್ನು ಕೇಂದ್ರ ಟಿಬೆಟಿಯನ್ ಆಡಳಿತ ಟಿಬೆಟ್ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಆಯೋಜಿಸಿದೆ. ಈ ಸಂದರ್ಭ ವಿಶ್ವದಾದ್ಯಂತ 2 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.