ಗಾಳ ಹಾಕಿ ಕುಂತವನನ್ನೇ ಎಳೆದೊಯ್ದ ಮೀನು !
Update: 2017-01-04 11:22 IST
ಸಿಡ್ನಿ, ಜ.4 :ಮೀನಿಗೆ ಗಾಳ ಹಾಕಿ ಕುಳಿತಿದ್ದ ಒಂಟಿ ಮೀನುಗಾರನೊಬ್ಬನನ್ನೇ ದೊಡ್ಡ ಮೀನೊಂದು ಎಳೆದೊಯ್ದ ಘಟನೆ ವಾಯುವ್ಯ ಕೇಪ್ ತೀರದಿಂದ 30 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಮಧ್ಯದಲ್ಲಿ ಮಂಗಳವಾರ ನಡೆದಿದೆ.
ದೊಡ್ಡ ಮೀನು ಆ ಮೀನುಗಾರನ ಗಾಳಕ್ಕೆ ಸಿಲುಕಿತ್ತಾದರೂ ಅದು ಆತನನ್ನೇ ಎಳೆದುಕೊಂಡು ಹೋಗಿತ್ತು. ಆತನ ಖಾಲಿ ಬೋಟ್ ವೇಗವಾಗಿ ಮುಂದೆ ಸಾಗುತ್ತಿದ್ದುದನ್ನು ನೋಡಿದ ಇನ್ನೊಬ್ಬ ಮೀನುಗಾರ ಕೂಡಲೇ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದ್ದು ಹಲವಾರು ಬೋಟುಗಳಲ್ಲಿ ರಕ್ಷಣಾ ಕಾರ್ಯಕರ್ತರು ಧಾವಿಸಿ ಆತನನ್ನು ರಕ್ಷಿಸಿದರು. ಇಪ್ಪತ್ತರ ಅಸುಪಾಸಿನ ಈ ಮೀನುಗಾರ ಬದುಕುಳಿದಿದ್ದೇ ದೊಡ್ಡ ಅದೃಷ್ಟ ಎಂದು ರಕ್ಷಣಾ ಕಾರ್ಯಕರ್ತರು ಹೇಳಿದ್ದಾರೆ.
ನ್ಯೂಝಿಲ್ಯಾಂಡ್ ಮೂಲದ ಆ ಯುವ ಮೀನುಗಾರನಿಗೆ ಎಕ್ಸ ಮೌತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.