ಲೇಡಿಗೋಶನ್ ಆಸ್ಪತ್ರೆ ಕಾಮಗಾರಿಗೆ ರಾಜ್ಯ ಸರಕಾರದಿಂದ 10 ಕೋಟಿ ರೂ: ಎಂ.ವೀರಪ್ಪ ಮೊಯಿಲಿ
ಮಂಗಳೂರು,ಜ.4: ಲೇಡಿ ಗೊಶನ್ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರಕಾರ ಹೆಚ್ಚುವರಿಯಾಗಿ 10 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಕೇಂದ್ರ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ತಿಳಿಸಿದ್ದಾರೆ.
ನಗರದ ಲೇಡಿ ಗೋಶನ್ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು. ಓಎನ್‌ಜಿಸಿ,ಎಂಆರ್‌ಪಿಎಲ್‌ನಿಂದ 21.7 ಕೋಟಿ ರೂ ಅನುದಾನದೊಂದಿಗೆ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ.ಈ ಪೈಕಿ 17 ಕೋಟಿ ರೂ.ಗಳ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.18.43 ಕೋಟಿ ರೂ ಗಳಿಗೆ ಟೆಂಡರ್ ಕರೆಯಲಾಗಿದೆ.ಮಾರ್ಚ್ 23ರಂದು ನೂತನ ಕಟ್ಟಡದ ಉದ್ಘಾಟನೆ ನಡೆಯಲಿದೆ.
ಮಾರ್ಚ್ ಅಂತ್ಯದೊಳಗೆ ನೂತನ ಕಟ್ಟಡದಲ್ಲಿ ಲೇಡಿಗೊಶನ್ ಆಸ್ಪತ್ರೆ ಕಾರ್ಯಾರಂಭವಾಗಲಿದೆ ಲೇಡಿ ಗೋಶನ್ ಆಸ್ಪತ್ರೆಯ ಇತರ ಕಾಮಗಾರಿ ಕೆಲಸಗಳಿಗೆ ಇನ್ನೂ ಸುಮಾರು 4 ಕೋಟಿ ರೂ ಕೊರತೆಯಾಗಲಿದೆ ಎಂದು ವೀರಪ್ಪ ಮೊಯಿಲಿ ತಿಳಿಸಿದರು.
ನೋಟು ಅಭಾವ ಸಮಸ್ಯೆ ಜ.14ರಂದು ಸಭೆ: 1000 ಹಾಗೂ 500 ರೂ. ಮುಖಬೆಲೆಯ ನೋಟು ನಿಷೇಧಗೊಳಿಸಿದ ಬಳಿಕ ಉಂಟಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ಜನವರಿ 14ರಂದು ಕೇಂದ್ರ ಹಣಕಾಸು ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಈ ಸಭೆಯಲ್ಲಿ ರಿಸರ್ವ್ ಬ್ಯಾಂಕ್‌ನ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮೊಯಿಲಿ ತಿಳಿಸಿದರು. ಎತ್ತಿನ ಹೊಳೆಯ ವಿಚಾರ ಗ್ರೀನ್ ಟ್ರಿಬ್ಯುನಲ್ ಮುಂದೆ ಇರುವುದರಿಂದ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮೊಯಿಲಿ ತಿಳಿಸಿದ್ದಾರೆ.