×
Ad

ಕಾಂಗ್ರೆಸ್‌ನಿಂದ ಬೆಂಕಿಯಲ್ಲಿ ಬೇಳೆಬೇಯಿಸುವ ಕೆಲಸ: ಸಂಜೀವ ಮಠಂದೂರು

Update: 2017-01-04 16:00 IST

ಮಂಗಳೂರು,ಜ.4: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬೆಂಕಿ ಹರಡಿಸುವ ಮತ್ತು ಅದೇ ಬೆಂಕಿಯಲ್ಲಿ ಬೇಳೆ ಬೇಯಿಸುವ ಕೆಲಸ ಮಾಡುತ್ತಿದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಮಂಗಳೂರು ಕ್ಷೇತ್ರದ ಶಾಸಕರ ಒತ್ತಡದಿಂದಾಗಿ ಕಾರ್ತಿಕ್ ಕೊಲೆ ಪ್ರಕರಣ ಬಯಲಿಗೆ ಬರುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ತಿಕ್ ಕೊಲೆ ಸಹಿತ ಉಳ್ಳಾಲ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಪ್ರಕರಣಗಳನ್ನು ಸಿಬಿಐ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಕೊಣಾಜೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದರು ಬಾಯಿತಪ್ಪಿನಿಂದಾಗಿ ಪದ ಬಳಕೆ ಮಾಡಿದ್ದಾರೆಯೇ ವಿನಃ ಉದ್ದೇಶಪೂರ್ವಕವಲ್ಲ ಎಂಬುದು ಅವರ ಭಾಷಣದ ಕ್ಲಿಪ್ಲಿಂಗ್ ನೋಡಿದಾಗ ಅರಿವಾಗುತ್ತದೆ ಎಂದ ಸಂಜೀವ ಮಠಂದೂರು, ಎತ್ತಿನಹೊಳೆ ವಿಚಾರದಲ್ಲಿ ಯಡಿಯೂರಪ್ಪರ ನಿಲುವಿನ ಬಗ್ಗೆ ಅವರೊಂದಿಗೆ ಜಿಲ್ಲಾ ಬಿಜೆಪಿ ವೈಯಕ್ತಿಕವಾಗಿ ಮಾತುಕತೆ ನಡೆಸಿ ಮನವರಿಕೆ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ಇಬ್ಬರು ಸಚಿವರಿಗೆ ಅಭಿವೃದ್ಧಿ ವಿಚಾರಗಳು ಬೇಡವಾಗಿದೆ. ಕೇಂದ್ರ ಹಣ ನೀಡಿದ್ದರೂ ಶಿರಾಡಿ ಘಾಟ್ ಅಭಿವೃದ್ಧಿ, ತುಂಬೆ ವೆಂಟೆಡ್‌ಡ್ಯಾಂ ಕಾಮಗಾರಿಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ ಸಂಜೀವ ಮಠಂದೂರು, ಅಭಿವೃದ್ಧಿ ವಿಚಾರಗಳನ್ನು ಮತ್ತು ತಮ್ಮ ವೈಲ್ಯವನ್ನು ಮರೆಮಾಚಲು ಸಂಸದರ ಹೇಳಿಕೆಯನ್ನು ವಿವಾದಗೊಳಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಯೋಗೀಶ್ ಭಟ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ, ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ್, ಕಿಶೋರ್ ರೈ, ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ರಾಮಚಂದ್ರ ಬೈಕಂಪಾಡಿ, ಜಿಲ್ಲಾ ಕೋಶಾಧಿಕಾರಿ ಸಂಜಯ ಪ್ರಭು ಹಾಗೂ ವಕ್ತಾರ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News