ಮಂಗಳೂರು: ವಿಶೇಷ ಭೂಸ್ವಾಧೀನಾಧಿಕಾರಿ ಎಸಿಬಿ ಬಲೆಗೆ

Update: 2017-01-04 12:03 GMT

ಮಂಗಳೂರು, ಜ.4: ಸಾರ್ವಜನಿಕರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲೇ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂಸ್ವಾಧೀನಾಧಿಕಾರಿ ಗಾಯತ್ರಿ ಎನ್. ನಾಯಕ್ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಕಾಸರಗೋಡಿನ ಯೋಗೀಶ್ ಎಂಬವರು ನೀಡಿದ ದೂರಿನಂತೆ ಬುಧವಾರ ಅಪರಾಹ್ನ ನಗರದ ಮಿನಿ ವಿಧಾನ ಸೌಧದ ಬಳಿಯ ವಿಶೇಷ ಭೂಸ್ವಾಧೀನಾಧಿಕಾರಿಯ ಕಚೇರಿಗೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಗಾಯತ್ರಿ ನಾಯಕ್‌ರನ್ನು ವಶಕ್ಕೆ ತೆಗೆದುಕೊಂಡರು.

ರಾ.ಹೆ. 169 (ಕಾರ್ಕಳ-ಮೂಡುಬಿದಿರೆ)ರ ವಿಶೇಷ ಭೂಸ್ವಾಧೀನಾಧಿಕಾರಿಯಾಗಿದ್ದ ಗಾಯತ್ರಿ ನಾಯಕ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರುದಾರ ಯೋಗೀಶ್‌ರಿಂದ ಸುಮಾರು 1.30 ಲಕ್ಷ ರೂ. ಲಂಚ ಸ್ವೀಕರಿಸಿದ್ದರು ಎನ್ನಲಾಗಿದೆ. ಅಲ್ಲದೆ ಸುಮಾರು 16 ಲಕ್ಷ ರೂ. ಲಂಚದ ಬೇಡಿಕೆ ಮುಂದಿಟ್ಟಿದ್ದು, ಆ ಹಿನ್ನೆಲೆಯಲ್ಲಿ ಯೋಗೀಶ್ ಎಸಿಬಿಗೆ ದೂರು ನೀಡಿದ್ದರು.

ಅದರಂತೆ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಯೋಗೀಶ್‌ರಿಂದ 20 ಸಾವಿರ ರೂ. ಸ್ವೀಕರಿಸುವಾಗಲೇ ದಾಳಿ ಮಾಡಿ ಗಾಯತ್ರಿಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News