ಮೆಲ್ಕಾರ್ : ರಸ್ತೆ ಅಪಘಾತದಲ್ಲಿ ಹೆಡ್ ಕಾನ್ಸ್‌ಟೇಬಲ್ ಸಾವು
ಬಂಟ್ವಾಳ, ಜ.4 : ಮೇಲ್ಕಾರ್ ನಲ್ಲಿ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪೊಲೀಸ್ ಸಿಬ್ಬಂದಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.
ಕಲ್ಲಡ್ಕ ಸಮೀಪ ಪೂರ್ಲಿಪಾಡಿ ನಿವಾಸಿಯಾಗಿರುವ ಪುತ್ತೂರು ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ರುಕ್ಮಯ (48) ಬಸ್ ಗಾಗಿ ಕಾಯುತ್ತಿರುವ ಸಂದರ್ಭ ಟ್ಯಾಂಕರ್ಢಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಮೃದು ಭಾಷಿಯಾಗಿದ್ದ ರುಕ್ಮಯ, ಬಂಟ್ವಾಳ ನಗರ, ವಿಟ್ಲ ಸಹಿತ ವಿವಿಧ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ತಮ್ಮ ಕರ್ತವ್ಯ ಅವಧಿಯಲ್ಲಿ ಜನರ ವಿಶ್ವಾಸ ಗಳಿಸಿಕೊಂಡಿದ್ದರು.
ಕೆಲಸ ನಿಮಿತ್ತ ಮಧ್ಯಾಹ್ನದ ವೇಳೆಗೆ ಮೆಲ್ಕಾರ್‌ಗೆ ಬಂದಿದ್ದ ಅವರು ವಾಪಸ್ಸು ಮನೆಗೆ ಹೋಗಲು ಬಸ್ಸಿಗಾಗಿ ರಸ್ತೆ ಬದಿ ಕಾಯುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದು, ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ನಿಲ್ದಾಣ ಗೊಂದಲಮಯ
ಮೆಲ್ಕಾರ್ ರಸ್ತೆ ಅಗಲಗೊಂಡರೂ ಬಸ್ ನಿಲ್ಲುವ ಜಾಗ ಗೊಂದಲಮಯವಾಗಿದೆ. ಇಲ್ಲಿ ಒಂದು ಬದಿಯಲ್ಲಿ ಬಸ್ ನಿಲ್ಲಲು ವ್ಯವಸ್ಥೆ ಇದ್ದರೂ ಸೂಕ್ತ ನಿಲ್ದಾಣದ ಕೊರತೆ ಇದೆ. ಹೀಗಾಗಿ ಬಸ್ಸುಗಳು ಇಲ್ಲದೇ ಇದ್ದರೆ, ಜನರು ನಿಲ್ಲುವ ಜಾಗದಲ್ಲೇ ವಾಹನಗಳು ವೇಗದಿಂದ ಸಾಗುತ್ತವೆ.