×
Ad

ನಿರ್ಮಾಣ ಹಂತದ ಕಟ್ಟಡಗಳಿಗೆ ಮನಪಾ ದಾಳಿ : 2 ಕಟ್ಟಡಗಳ ಲೈಸೆನ್ಸ್ ಅಮಾನತು

Update: 2017-01-04 19:44 IST

ಮಂಗಳೂರು, ಜ.4: ಸುರಕ್ಷೆ ಮತ್ತು ಶುಚಿತ್ವ ಕಾಪಾಡದ ಆರೋಪದ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸವಿತಾ ಸನಿಲ್ ನೇತೃತ್ವದ ತಂಡ ನಗರದ ನೆಲ್ಲಿಕಾಯಿ ರಸ್ತೆ ಬಳಿಯ ಖಾಸಗಿ ವಾಣಿಜ್ಯ ಸಂಕೀರ್ಣ ಹಾಗೂ ದೇರೆಬೈಲ್ ಸಮೀಪದ ಅಪಾರ್ಟ್‌ಮೆಂಟ್‌ವೊಂದಕ್ಕೆ ಬುಧವಾರ ದಾಳಿ ನಡೆಸಿ ಈ ಎರಡು ಕಟ್ಟಡಗಳ ಲೈಸೆನ್ಸ್ ಅಮಾನತುಪಡಿಸಿ ತಲಾ 15 ಸಾವಿರ ರೂ. ದಂಡ ವಿಧಿಸಿದೆ.

ಮಲೇರಿಯಾ-ಡೆಂಗ್ ಜ್ವರದ ಹಿನ್ನೆಲೆಯಲ್ಲಿ ಪಾಲಿಕೆ ಆರೋಗ್ಯ ಮತ್ತು ನಗರ ಯೋಜನಾ ಇಲಾಖೆ ಜಂಟಿ ದಾಳಿ ನಡೆಸಿ ಶುಚಿತ್ವ ಕಾಪಾಡದ ಕಟ್ಟಡಗಳ ಮಾಲಕರಿಗೆ ಬಿಸಿ ಮುಟ್ಟಿಸಿದೆ.

ಸ್ಟೇಟ್‌ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯ ನಾಲ್ಕು ಮಹಡಿಯ ಕಟ್ಟಡದಲ್ಲಿ ನೆಲ ಅಂತಸ್ತಿನಲ್ಲೇ ಕೊಚ್ಚೆ ನೀರು ನಿಂತು ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿರುವುದು ಕಂಡು ಬಂತು. ಕಟ್ಟಡ ಮಾಲಕರಿಗೆ ಐದು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಶುಚಿತ್ವ ಬಗ್ಗೆ ಗಮನ ಕೊಡದ ಕಾರಣ ಕಟ್ಟಡದ ಪರವಾನಿಗೆ ಅಮಾನತು ಮಾಡುವಂತೆ ಸಹಾಯಕ ನಗರ ಯೋಜನಾಧಿಕಾರಿ ಮಂಜುನಾಥ ಸ್ವಾಮಿಗೆ ಸೂಚಿಸಿದರು.

ದೇರೆಬೈಲ್‌ನ 12 ಮಹಡಿಯ ಅಪಾರ್ಟ್‌ಮೆಂಟ್‌ನ ಮೇಲ್ತಂತಸ್ತಿನಲ್ಲಿ ನೀರು ನಿಂತು ಸೊಳ್ಳೆ ಉತ್ಪನ್ನದ ತಾಣವಾಗಿತ್ತು. ಈ ಅಪಾರ್ಟ್‌ಮೆಂಟ್‌ನಲ್ಲಿ ಯಾವುದೇ ಸುರಕ್ಷಾ ಕ್ರಮವಿಲ್ಲದೆ ಹೊರ ರಾಜ್ಯದ ಕಾರ್ಮಿಕರು 12 ಮಹಡಿ ಎತ್ತರದ ಕಟ್ಟಡಕ್ಕೆ ಪೈಂಟ್ ಬಳಿಯುವುದು ಕಂಡು ಬಂತು.

2016 ಸಾಲಿನಲ್ಲಿ ಶುಚಿತ್ವ ಪಾಲಿಸದ 152 ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಇದರಲ್ಲಿ 42 ಮಂದಿಗೆ 1.80 ಲಕ್ಷ ರೂ. ದಂಡ ವಿಧಿಸಲಾಗಿದೆ. ಇನ್ನೂ 2 ಲಕ್ಷ ರೂ. ದಂಡ ಸಂಗ್ರಹಿಸಲು ಬಾಕಿ ಉಳಿದಿದೆ ಎಂದು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News