ಜಯಲಲಿತಾರಿಗೆ ಚಿಕಿತ್ಸೆ : ಹೈಕೋರ್ಟ್‌ಗೆ ಇನ್ನೂ ಎರಡು ಅರ್ಜಿಗಳ ಸಲ್ಲಿಕೆ
Update: 2017-01-04 20:08 IST
ಚೆನ್ನೈ,ಜ.4: ಸುದೀರ್ಘ ಅನಾರೋಗ್ಯದ ಬಳಿಕ ಡಿ.5ರಂದು ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ನೀಡಲಾಗಿದ್ದ ಚಿಕಿತ್ಸೆಯ ಕುರಿತು ವಿಚಾರಣೆಯನ್ನು ನಡೆಸುವಂತೆ ಕೋರಿ ಇನ್ನೆರಡು ಅರ್ಜಿಗಳು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ. ಜಯಾರ ಸಾವಿಗೆ ಕಾರಣವಾದ ಸಂದರ್ಭಗಳ ಕುರಿತು ವಿಚಾರಣೆಯನ್ನು ಕೋರಿ ಎಡಿಎಂಕೆ ಕಾರ್ಯಕರ್ತ ಪಿ.ಎ.ಜೋಸೆಫ್ ಈ ಹಿಂದೆ ಸಲ್ಲಿಸಿರುವ ಅರ್ಜಿಯ ಜೊತೆಗೆ ಈ ಅರ್ಜಿಗಳನ್ನು ಸೇರಿಸಿದ ಮುಖ್ಯ ನ್ಯಾಯಾಧೀಶ ಎಸ್.ಕೆ.ಕೌಲ್ ಮತ್ತು ನ್ಯಾ.ಎಂ.ಸುಂದರ್ ಅವರನ್ನೊಳಗೊಂಡ ಪೀಠವು, ಈ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜ.9ಕ್ಕೆ ನಿಗದಿಗೊಳಿಸಿತು.
ಸಕ್ರಿಯ ಎಡಿಎಂಕೆ ಸದಸ್ಯ ಎಂದು ಹೇಳಿಕೊಂಡಿರುವ ನಾಗಪಟ್ಟಣಂ ನಿವಾಸಿ ಜ್ಞಾನಶೇಖರನ್ ಮತ್ತು ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಅವರು ಹೊಸ ಅರ್ಜಿದಾರರಾಗಿದ್ದಾರೆ.