ವಕ್ಫ್ ಎರಡನೆ ಸರ್ವೆಗಾಗಿ 77ಮಸೀದಿ, 126ಆಸ್ತಿ ಗುರುತು: ನಕ್ವಾ
ಉಡುಪಿ, ಜ.4: 2014-16ರಲ್ಲಿ ಉಡುಪಿ ಜಿಲ್ಲೆಯಲ್ಲಿ ವಕ್ಫ್ ಆಸ್ತಿಗಳ ಎರಡನೆ ಸರ್ವೆಗಾಗಿ ಒಟ್ಟು 77ಮಸೀದಿಗಳು ಮತ್ತು 126 ಆಸ್ತಿಗಳನ್ನು ಗುರುತಿಸಲಾಗಿದ್ದು, 42 ಮಸೀದಿಗಳು ಮತ್ತು 63 ಆಸ್ತಿಗಳನ್ನು ಹೊಸದಾಗಿ ನೋಂದಾವಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಯಹ್ಯಾ ನಕ್ವಾ ತಿಳಿಸಿದ್ದಾರೆ.
ಮಲ್ಪೆಯ ಚಿಲ್ಲೀಸ್ ಹೊಟೇಲಿನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ 2017-18ನೆ ಸಾಲಿನ ಹಜ್ ಕಮಿಟಿಯ ಹಜ್ ಫಾರಂ ಅನ್ನು ಬಿಡುಗಡೆ ಗೊಳಿಸಿ, 2014-16ರ ತನ್ನ ಅಧ್ಯಕ್ಷ ಅವಧಿಯ ಸಾಧನೆ ಕುರಿತು ಅವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಒಟ್ಟು 398 ಆಸ್ತಿ ಹಾಗೂ 360.2 ಎಕರೆ ಭೂಮಿ 1966ರ ಆ.8ರಲ್ಲಿ ರಾಜಪತ್ರ ಆಗಿದೆ. ಜಿಲ್ಲೆಯ 129 ವಕ್ಫ್ ಸಂಸ್ಥೆ ಗಳಲ್ಲಿ 52 ಕಮಿಟಿ ಮತ್ತು 28 ಬೈಲಾಗಳನ್ನು ರಚಿಸಲಾಗಿದೆ ಎಂದರು.
2014-15ರಿಂದ 2016-17ನೆ ಸಾಲಿನವರೆಗೆ ಸರಕಾರದಿಂದ 39.50 ಲಕ್ಷ ರೂ. ಅನುದಾನವು ವಕ್ಫ್ ಸಂಸ್ಥೆಗಳಿಗೆ ಬಿಡುಗಡೆಯಾಗಿದೆ. ಅದೇ ರೀತಿ ಕಾಪು ಮಲ್ಲಾರ್ ಮಸೀದಿಗೆ ಶಾಸಕ ವಿನಯ ಕುಮಾರ್ ಸೊರಕೆ ತಮ್ಮ ಅನುದಾನದಿಂದ 10ಲಕ್ಷ ರೂ. ಹಾಗೂ ಕೋಟ ಮತ್ತು ಕೋಡಿಕನ್ಯಾಣ ಮಸೀದಿಗೆ ತಲಾ ಐದು ಲಕ್ಷ ರೂ. ವಕ್ಫ್ ಅನುದಾನವನ್ನು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಒದಗಿಸಿದ್ದಾರೆ ಎಂದು ಅವರು ತಿಳಿಸಿದರು.
129 ವಕ್ಫ್ ಸಂಸ್ಥೆಗಳಲ್ಲಿ 79 ಮಸೀದಿಗಳ 79 ಪೆಶ್ ಇಮಾಮ್ ಮತ್ತು 66 ವೌಂಝಿನ್ಸ್‌ಗಳಿಗೆ ಕ್ರಮವಾಗಿ 3100ರೂ. ಮತ್ತು 2500ರೂ. ಸರಕಾರದಿಂದ ಮಾಶಾಸನ ದೊರೆಯುತ್ತಿವೆ. ಕಳೆದ ಮೂರು ವರ್ಷಗಳಲ್ಲಿ ವಕ್ಫ್ ವಂತಿಗೆಯಿಂದ 11,18,162 ರೂ. ಮತ್ತು ವಿವಾಹ ನೊಂದಾಣಿ ಯಿಂದ 10,87,000ರೂ. ಸೇರಿದಂತೆ ಒಟ್ಟು 22,05,162ರೂ. ಹಣ ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.
ಎಂಟು ಮಸೀದಿಗಳ ಭೂವಿವಾದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾ ಲಯದಲ್ಲಿದೆ. 17 ಮಸೀದಿಗಳ ಲೆಕ್ಕಪರಿಶೋಧನೆ ಪೂರ್ಣಗೊಳಿಸಲಾಗಿದೆ. ಆಡಳಿತ ಮಂಡಳಿಗೆ ಸಂಬಂಧಿಸಿದ 14 ಮಸೀದಿಗಳಲ್ಲಿ 12 ಮಸೀದಿಗಳ ವಿವಾದವನ್ನು ಬಗೆಹರಿಸಲಾಗಿದೆ. ಉಳಿದಂತೆ ಹೂಡೆ ಹಾಗೂ ಕಂಡ್ಲೂರು ಮಸೀದಿಯ ವಿವಾದವು ನ್ಯಾಯಾಲಯ ಹಾಗೂ ವಕ್ಫ್ ಬೋರ್ಡಿನಲ್ಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಕ್ಫ್ ಸಲಹಾ ಮಂಡಳಿಯ ಉಪಾಧ್ಯಕ್ಷರಾದ ಎ.ಕೆ. ಯೂಸುಫ್ ಕುಂದಾಪುರ, ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸದಸ್ಯರಾದ ಅಶ್ಫಕ್ ಅಹ್ಮದ್, ರಹ್ಮತುಲ್ಲಾ ಕುಕ್ಕುಂದೂರು, ಅಬ್ದುಲ್ ಖಾದರ್ ಆತ್ರಾಡಿ, ಉಬೇದುಲ್ಲಾ ನದ್ವಿ ಕಂಡ್ಲೂರು, ಅಮೀರ್ ಹಂಝ, ಮುಹಮ್ಮದ್ ಮರ ಕಡ, ಮುಹಮ್ಮದ್ ವೌಲ, ಡಾ.ರಫೀಕ್, ಜಮಾಲುದ್ದೀನ್, ಖಲೀಲ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಅಕ್ರಮ ವಕ್ಫ್ ಆಸ್ತಿಗಳ ತನಿಖೆಗೆ ಆಗ್ರಹ
ವಕ್ಫ್ ಆಸ್ತಿಯ ದುರುಪಯೋಗ, ಒತ್ತುವರಿ, ಕಾನೂನು ಬಾಹಿರ ವರ್ಗಾವಣೆ ಕುರಿತ ತನಿಖೆಗೆ ಲೋಕಾಯುಕ್ತ ಆದೇಶಿಸಿದ್ದು, ಅದರಂತೆ ಉಡುಪಿ ಜಿಲ್ಲಾಧಿಕಾರಿಗಳು ತನಿಖೆ ನಡೆಸಿ 174 ಎಕರೆ ಜಾಗದಲ್ಲಿ 268 ವಕ್ಫ್ ಆಸ್ತಿಯನ್ನು ಗುರುತಿಸಿ ಸರ್ವೆ ನಡೆಸಿ ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ. 32.43 ಎಕರೆಯಲ್ಲಿ 42 ಅಕ್ರಮ ಆಸ್ತಿಯ ತನಿಖೆ ಬಾಕಿ ಇದ್ದು, ಜಿಲ್ಲಾಧಿಕಾರಿಗಳು ಕೂಡಲೇ ಈ ಆಸ್ತಿಗಳ ಬಗ್ಗೆ ತನಿಖೆ ಮಾಡಬೇಕು ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷ ಯಹ್ಯಾ ನಕ್ವಾ ಆಗ್ರಹಿಸಿದ್ದಾರೆ.