ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ- ಪೇರೋಡ್ ಉಸ್ತಾದ್
ಪುತ್ತೂರು, ಜ.4 : ಸಿಲ್ವಲ್ ಜುಬಿಲಿ ಸಂಭ್ರಮದಲ್ಲಿರುವ ಕೇರಳದ ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾಸಂಸ್ಥೆಗೆ ಕೇರಳದ ಜನರಿಗಿಂತಲೂ ಹೆಚ್ಚಿನ ಸಹಕಾರ ಕರ್ನಾಟಕದ ಜನತೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ ಎಂದು ಧಾರ್ಮಿಕ ಪಂಡಿತ ಪೇರೋಡ್ ಅಬ್ದುರ್ರಹ್‌ಮಾನ್ ಸಖಾಫಿ ಹೇಳಿದರು.
ಅವರು ಕುಟ್ಯಾಡಿ ಸಿರಾಜುಲ್ ಹುದಾ ವಿದ್ಯಾಸಂಸ್ಥೆಯ ಸಿಲ್ವರ್ ಜುಬಿಲಿ ಪ್ರಚಾರದ ಪ್ರಯುಕ್ತ ಪುತ್ತೂರು ಪುರಭವನದಲ್ಲಿ ಮಂಗಳವಾರ ರಾತ್ರಿ ನಡೆದ ಸಂದೇಶ ಯಾತ್ರೆ ಹಾಗೂ ಸುನ್ನೀ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.
ಸತ್ಯವೆಂಬುದು ಇಸ್ಲಾಮಿನ ಗುರುತಾಗಿದ್ದು, ಸ್ವಧರ್ಮದ ಅನುಸರಣೆಯೊಂದಿಗೆ ಇತರ ಧರ್ಮಗಳನ್ನು ಪ್ರೀತಿಸುವುದು ಇಸ್ಲಾಮಿನ ಸಿದ್ದಾಂತವಾಗಿದೆ. ಅನ್ಯಾಯ ಮತ್ತು ಅಗೌರವಗಳಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ ಎಂದರು.
ಸಿರಾಜುಲ್ ಹುದಾ ಸಿಲ್ವರ್ ಜುಬಿಲಿ ಸ್ಮರಣಾರ್ಥ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ದಾನಿಗಳ ಸಹಾಯದಿಮದ ಕಡು ಬಡವರಿಗೆ ತಲಾ ರೂ. 6 ಲಕ್ಷ ವೆಚ್ಚದಲ್ಲಿ 25 ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ತಾಜುಲ್ ಉಲಮಾ ಹೆಸರಿನಲ್ಲಿ ಸುಸಜ್ಜಿತ ಅಡಿಟೋರಿಯಂ ನಿರ್ಮಾಣದ ಗುರಿಯಿದೆ ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಸುನ್ನತ್ ಜಮಾಅತ್‌ನ ಆಶಯಗಳನ್ನು ಅನುಸರಿಸಿ ಪ್ರಚಾರ ಪಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸಂದೇಶ ಭಾಷಣ ಮಾಡಿದ ಸಂದೇಶ ಯಾತ್ರೆಯ ಕರ್ನಾಟಕ ಸ್ವಾಗತ ಸಮಿತಿ ಅಧ್ಯಕ್ಷ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ವಿವಿಧ ವಲಯಗಳಲ್ಲಿ ತೊಡಗಿಸಿಕೊಂಡಿರುವ ನಾವು ಧಾರ್ಮಿಕ ಚೌಕಟ್ಟಿನಲ್ಲಿ ಕೆಲಸ ಮಾಡಿದಲ್ಲಿ ಯಶಸ್ಸು ಸಾಧ್ಯ. ಸಮುದಾಯ ಹಿಂದುಳಿಯಲು ಧಾರ್ಮಿಕ ಪಂಡಿತರು ಕಾರಣವಲ್ಲ. ಅವರಿಂದಾಗಿ ಸಮುದಾಯದಲ್ಲಿ ಜಾಗೃತಿ ಮೂಡಿದೆ ಎಂದರು.
ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್. ಇಬ್ರಾಹಿಂ ಕಮ್ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ, ಪೆರ್ಲ ಮುದ್ರಿಸ್ ರಫೀಕ್ ಸಅದಿ ದೇಲಂಪಾಡಿ, ಮುಹಮ್ಮದ್ ಅಲೀ ಸಖಾಫಿ, ಅಬೂಸುಫ್ಯಾನ್, ವಿ.ಬಿಲ್ಡ್ ಎಸೋಸಿಯೇಟ್ಸ್ ಎಂ.ಡಿ ಇಬ್ರಾಹಿಂ ಹಾಜಿ ಅಲೆಕ್ಕಾಡಿ, ಎಸ್‌ಎಸ್‌ಎಫ್ ರಾಷ್ಟ್ರೀಯ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಎಸ್‌ಜೆಯು ದ.ಕ. ಜಿಲ್ಲಾಧ್ಕಕ್ಷ ಮಹಮ್ಮದಲಿ ಫೈಝಿ ಸಂಪ್ಯ, ಮುಹಮ್ಮದ್ ಸಅದಿ ಒಳವೂರು, ಅಶ್ರಫ್ ಸಅದಿ ಮಳ್ಳೂರು, ಕುಂಬ್ರ ಮರ್ಕರ್ ಕಾಲೇಜ್‌ನ ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಹಾರಿ ಅರಿಯಡ್ಕ, ಎಸ್‌ಎಸ್‌ಎಪ್ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಕೆಎಂಎಚ್ ಝುಹ್‌ರಿ ಕೊಂಬಾಳಿ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಅಧ್ಯಕ್ಷ ಶಾಕಿರ್ ಸ್ವಾಗತಿಸಿದರು.
ಅಬ್ದುಲ್ ರಹಿಮಾನ್ ಫೈಝಿ ಸಂಪ್ಯ ಪ್ರಾರ್ಥಿಸಿದರು. ಅಬ್ದುಸ್ಸಲಾಂ ನಿಝಾಮಿ ಚೆನ್ನಾರ್ ನಿರೂಪಿಸಿದರು.