ರೋಗಿಗೆ ಹೊಸ ಟಿಬಿ ಔಷಧಿಯನ್ನು ಕೊಡಿಸಬಹುದೇ ?
ಹೊಸದಿಲ್ಲಿ, ಜ.4: ಔಷಧಿಗೆ ವ್ಯಾಪಕವಾದ ಪ್ರತಿರೋಧವನ್ನು ತೋರುವಂತಹ ನಮೂನೆಯ ಕ್ಷಯರೋಗದಿಂದ ಬಳಸುತ್ತಿರುವ ರೋಗಿಯೊಬ್ಬರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರದ ಹಾಗೂ ಉತ್ಪಾದಕರಿಂದ ಮಾತ್ರವೇ ಪೂರೈಕೆಯಾಗುವ ನೂತನ ಮದ್ದೊಂದು ಲಭ್ಯವಾಗುವಂತೆ ಮಾಡಬಹುದೇ ಎಂದು ದಿಲ್ಲಿ ಹೈಕೋರ್ಟ್ ಬುಧವಾರ ಕೇಂದ್ರ ಸರಕಾರದ ಹಾಗೂ ದಿಲ್ಲಿಯ ಕ್ಷಯರೋಗದ ಆಸ್ಪತ್ರೆಯೊಂದರ ಆಡಳಿತವರ್ಗವನ್ನು ಪ್ರಶ್ನಿಸಿದೆ.
ಕ್ಷಯರೋಗ ಪೀಡಿತ 18 ವರ್ಷದ ಈ ಯುವತಿಗೆ ಅಮೆರಿಕದ ಔಷಧ ಕಂಪೆನಿ ಜಾನ್‌ಸನ್ ಆ್ಯಂಡ್ ಜಾನ್‌ಸನ್‌ನ ಉತ್ಪನ್ನವಾದ ಬೆಡಾಕ್ವಿಲಿನ್‌ನಿಂದ ಚಿಕಿತ್ಸೆ ನೀಡಲು ಆಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ)ಯ ಮಾರ್ಗದರ್ಶಿ ಸೂತ್ರಗಳು ಹಾಗೂ ಪರಿಷ್ಕೃತ ರಾಷ್ಟ್ರೀಯ ಟಿಬಿ ನಿಯಂತ್ರಣ ಕಾರ್ಯಕ್ರಮದ ಅವಶ್ಯಕತೆಗಳನ್ನು ಈಡೇರಿಸುತ್ತಾರೆಯೇ ಎಂಬ ಬಗ್ಗೆ ಅಫಿದಾವಿತ್ ಒಂದನ್ನು ಸಲ್ಲಿಸುವಂತೆ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರು ಲಾಲ್‌ರಾಮ್ ಸ್ವರೂಪ್ (ಎಲ್‌ಆರ್‌ಎಸ್) ಟಿಬಿ ಆಸ್ಪತ್ರೆಗೆ ಸೂಚಿಸಿದ್ದಾರೆ.
ರೋಗಿಗೆ ಔಷಧಿಯನ್ನು ನೀಡುವ ಮೊದಲು ಔಷಧಿಯ ಸಂವೇದನಾಶೀಲತೆ ಬಗ್ಗೆ ಪರೀಕ್ಷೆಗಳನ್ನು ನಡೆಸಬೇಕೆಂಬ ಡಬ್ಲು ಎಚ್‌ಓ ನ ಮಾರ್ಗದರ್ಶಿ ಸೂತ್ರಗಳನ್ನು ಆಸ್ಪತ್ರೆಯು ಅನುಸರಿಸುತ್ತಿಲ್ಲವೆಂಬ ಕ್ಷಯರೋಗ ತಜ್ಞರ ಆಕ್ಷೇಪಕ್ಕೆ ಪ್ರತಿಕ್ರಿಯಿಸುವಂತೆಯೂ ನ್ಯಾಯಾಲಯವು ಆಸ್ಪತ್ರೆಯ ಆಡಳಿತವರ್ಗವನ್ನು ಕೇಳಿಕೊಂಡಿದೆ.
ಕ್ಷಯರೋಗ ಪೀಡಿತ ಯುವತಿಯ ತಂದೆ ಕೌಶಲ್ ಸಿಂಗ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿ, ಆಸ್ಪತ್ರೆಯ ಆಡಳಿತವು ಮತ್ತಷ್ಟು ಪರೀಕ್ಷೆಗಳನ್ನು ನಡೆಸದೆಯೇ ಔಷಧಿಯನ್ನು ನೀಡುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲು ಇಚ್ಚಿಸುತ್ತಿಲ್ಲವೆಂದು ದೂರಿದ್ದಾರೆ. ತನಗೆ ಸಂಬಂಧಪಟ್ಟ ಔಷಧಿಯು ದೊರೆತಲ್ಲಿ ತಾನದನ್ನು ಬೇರೆ ಆಸ್ಪತ್ರೆ ಅಥವಾ ವೈದ್ಯರ ಮೂಲಕ ಮಗಳಿಗೆ ಕೊಡಿಸಲು ಸಿದ್ಧನಿರುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಆದರೆ ಯುವತಿಗೆ ಚಿಕಿತ್ಸೆ ನೀಡುತ್ತಿರುವ ಎಲ್‌ಆರ್‌ಎಸ್ ಟಿಬಿ ಆಸ್ಪತ್ರೆಯು ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ರೋಗಿಗೆ ಔಷಧಿ ನೀಡಿಕೆಗೆ ಸಂಬಂಧಿಸಿ ನಿಗದಿಪಡಿಸಲಾದ ಶಿಷ್ಟಾಚಾರಗಳನ್ನು ತಾನು ಅನುಸರಿಸುತ್ತಿದ್ದು, ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲವೆಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.
ಆದರೆ ಆಸ್ಪತ್ರೆಯ ವಾದವನ್ನು ಒಪ್ಪದ ನ್ಯಾಯಾಲಯವು ಕೆಲವೊಮ್ಮೆ ವೈದ್ಯಕೀಯ ವೃತ್ತಿಯಲ್ಲಿ, ಸಂಬಂಧಪಟ್ಟ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ರೋಗಿಗೆ ಮಾಹಿತಿಯನ್ನು ನೀಡಿದ ಬಳಿಕ ಅದನ್ನು ಅವರಿಗೆ ನೀಡುವಂತಹ ವೃತ್ತಿಪರ ತೀರ್ಮಾನವನ್ನು ಕೈಗೊಳ್ಳಬಹುದಾಗಿದೆಯೆಂದು ಹೇಳಿದೆ.
ನಿಗದಿತ ಔಷಧಿಯನ್ನು ರೋಗಿಗೆ ಒದಗಿಸುವ ಬಗ್ಗೆ ತನಗೆ ಮೂರು ದಿನಗಳೊಳಗೆ ಅಫಿದಾವಿತ್ ಸಲ್ಲಿಸುವಂತೆ ನ್ಯಾಯಾಲಯವು ಕೇಂದ್ರ ಸರಕಾರ ಹಾಗೂ ಆಸ್ಪತ್ರೆಯ ಆಡಳಿತ ವರ್ಗಕ್ಕೆ ಆದೇಶಿಸಿದೆ ಹಾಗೂ ಮುಂದಿನ ಆಲಿಕೆಯನ್ನು ಜನವರಿ 9ಕ್ಕೆ ಮುಂದೂಡಿದೆ.