×
Ad

ನಗರಾಡಳಿತ ಸಂಸ್ಥೆಗಳಲ್ಲಿ ಇ-ಪಾವತಿಗಳಿಗೆ ನಗದು ರಿಯಾಯಿತಿ ನೀಡಿ : ರಾಜ್ಯಗಳಿಗೆ ಕೇಂದ್ರದ ಸಲಹೆ

Update: 2017-01-04 20:49 IST

ಹೊಸದಿಲ್ಲಿ, ಜ.4: ನಗರಾಡಳಿತ ಸಂಸ್ಥೆಗಳಿಗೆ ಸಾರ್ವಜನಿಕರು ಮಾಡುವ ಇ-ಪಾವತಿಗಳಿಗೆ ಹೆಚ್ಚುವರಿ ಶುಲ್ಕಗಳನ್ನು ವಿಧಿಸದಂತೆ ನೋಡಿಕೊಳ್ಳಬೇಕೆಂದು ಕೇಂದ್ರವು ರಾಜ್ಯ ಸರಕಾರಗಳಿಗೆ ಬುಧವಾರ ಸೂಚನೆ ನೀಡಿದೆ. ವಿದ್ಯುತ್,ಟೆಲಿಫೋನ್, ನೀರು ಮತ್ತಿತರ ಸೇವಾಬಿಲ್‌ಗಳಿಗೆ ಮಾಡಲಾಗುವ ಡಿಜಿಟಲ್ ಪಾವತಿಗಳಇಗೆ ನಗದು ರಿಯಾಯಿತಿಯಂತಹ ಪ್ರೋತ್ಸಾಹಕ್ರಮಗಳನ್ನು ಜಾರಿಗೊಳಿಸುವ ಬಗ್ಗೆ ಪರಿಶೀಲಿಸುವಂತೆಯೂ ಅದು ಸಲಹೆ ನೀಡಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ರಾಜ್ಯ ನಗರಾಭಿವೃದ್ಧಿ ಸಚಿವರುಗಳಿಗೆ ಬರೆದಿರುವ ಪತ್ರದಲ್ಲಿ, ‘‘ ರಾಜ್ಯದ ಎಲ್ಲಾ ನಗರಾಡಳಿತ ಸಂಸ್ಥೆಗಳು ತಮ್ಮ ಪಾವತಿಗಳು ಹಾಗೂ ಸ್ವೀಕೃತಿಗಳಿಗಾಗಿ ಇಲೆಕ್ಟ್ರಾನಿಕ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಅವುಗಳನ್ನು ಪ್ರೇರೇಪಿಸಬೇಕಾಗಿದೆ’’ ಎಂದು ತಿಳಿಸಿದ್ದಾರೆ.

ಜಾಗೃತಿ ಶಿಬಿರಗಳನ್ನು ಆಯೋಜಿಸುವ ಮೂಲಕ ಹಾಗೂ ಖಾತೆಗಳನ್ನು ತೆರೆಯುವ ಮೂಲಕ ನಗದುರಹಿತ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ನಗರಾಡಳಿತ ಸಂಸ್ಥೆಗಳು ಅತ್ಯಂತ ಮಹತ್ವದ ಹಾಗೂ ಪ್ರೇರಣಾದಾಯಕ ಪಾತ್ರವನ್ನು ನಿರ್ವಹಿಸಬಲ್ಲದು ಎಂದು ಹೇಳಿದ್ದಾರೆ.

ವಿವಿಧ ಇ-ಪಾವತಿ ವ್ಯವಸ್ಥೆಗಳ ಮೂಲಕ ಸಾರ್ವಜನಿಕ ಸೇವೆಗಳ ಬಿಲ್‌ಗಳನ್ನು ಪಾವತಿಸುವವರಿಗೆ ಶೇ.1ರಷ್ಟು ನಗದು ಮರುಪಾವತಿಯನ್ನು ನೀಡುವಂತಹ ಉತ್ತೇಜಕ ಕ್ರಮಗಳನ್ನು ಆರಂಭಿಸುವ ಬಗ್ಗೆ ಪರಿಶೀಲಿಸುವಂತೆಯೂ ನಾಯ್ಡು ಸಲಹೆ ನೀಡಿದ್ದಾರೆ.
ತೆರಿಗೆಗಳು, ಶುಲ್ಕಗಳು, ಲೈಸೆನ್ಸ್ ಶುಲ್ಕ, ಭೋಗ್ಯ (ಲೀಸ್), ಬಾಡಿಗೆ ಸಂಗ್ರಹದಂತಹ ಆರ್ಥಿಕ ವ್ಯವಹಾರಗಳಲ್ಲಿ ಶೇ.100ರಷ್ಟು ಇ-ಪಾವತಿ ವ್ಯವಸ್ಥೆಯನ್ನು ನಗರಾಡಳಿತ ಸಂಸ್ಥೆಗಳು ಜಾರಿಗೆ ತರಬಹುದೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News