ಜ.13ರಂದು ಪುತ್ತೂರಿನಲ್ಲಿ ಬೃಹತ್ ಉದ್ಯೋಗ ಮೇಳ
ಮಂಗಳೂರು,ಜ.4: ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ರೂಮನ್ ಟೆಕ್ನಾಲಜಿ ವಿಶೇಷ ಸಹಯೋಗದೊಂದಿಗೆ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಪ್ರಮಾಣದ ವಿವೇಕ ಉದ್ಯೋಗ ಮೇಳ ಜ.13ರಂದು ನೆಹರೂ ನಗರದ ವಿವೇಕಾನಂದ ಕ್ಯಾಂಪಸ್ ವಠಾರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜೋದ್ಯಮ ಸಚಿವ ರಾಜೀವ ಪ್ರತಾಪ್ ರೂಢಿ ಮೇಳವನ್ನು ಮತ್ತು ತರಬೇತಿ ಕೇಂದ್ರವನ್ನು ಉದ್ಘಾಟಿಸ ಲಿದ್ದಾರೆ.ಜ.12ರಂದು ವಿವೇಕಾನಂದ ಕ್ಯಾಂಪಸ್ ವಠಾರದದಲ್ಲಿ ನಡೆಯುವ ವಿವೇಕಾನಂದ ಜಯಂತಿಯನ್ನು ಮತ್ತು ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ 90.8 ಎಫ್.ಎಂನ್ನು ವಾಣಿಜ್ಯ ಕೈಗಾರಿಕೆ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದಾರೆ.
ಈ ಉದ್ಯೋಗ ಮೇಳದಲ್ಲಿ 300ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನೀರೀಕ್ಷೆ ಇದೆ ಈಗಾಗಲೆ 150 ಕಂಪೆನಿಗಳು ಭಾಗವಹಿಸಲು ನೋಂದಾಯಿಸಿ ಕೊಂಡಿವೆ.ಉದ್ಯೋಗಾಕಾಂಕ್ಷಿಗಳ ಪೈಕಿ ಈಗಾಗಲೆ 10,000ಕ್ಕೂ ಅಧಿಕ ಮಂದಿ ಹೆಸರು ದಾಖಲಿಸಿರುತ್ತಾರೆ.ಪ್ರಾಥಮಿಕ ,ಪ್ರೌಢ ಶಿಕ್ಷಣ ಮತ್ತು ಬಿ.ಎ, ಬಿ.ಕಾಂ, ಬಿಎಸ್ಸಿ, ಬಿ.ಕಾಂ, ಐಟಿಐ,ಡಿಪ್ಲೋಮಾ,ಇಂಜಿನಿಯರಿಂಗ್,ಎಂಬಿಎ,ಬಿಸಿಎ,ಮುಂತಾದ ಪದವಿ ಮತ್ತು ವೃತ್ತಿಪರ ಶಿಕ್ಷಣ ಹೊಂದಿದವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅವಕಾಶವಿದೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವವರಿಗೆ ಯಾವೂದೇ ನೋಂದಣಿ ಶುಲ್ಕವಿರುವುದಿಲ್ಲ.ಉಚಿತ ಊಟ ಉಪಹಾರದ ವ್ಯವಸ್ಥೆ ಇದೆ.ಮೇಳದಲ್ಲಿ ಭಾಗವಹಿಸಲು ಆಗಮಿಸುವವರು ತಮ್ಮ ಮೂಲ ಅಂಕಪಟ್ಟಿ ,ಬಯೋಡಾಟಾ ತರಬೇಕು.ಜೊತಗೆ ಸ್ಥಳದಲ್ಲೂ ನೊಂದಾಯಿಸಲು ಅವಕಾಶವಿದೆ ಮತ್ತು 8762837499ಕ್ಕೆ ಕರೆಮಾಡಿ ಹೆಸರು ನೋಂದಾಯಿಸಬಹುದು .
ಗ್ರಾಮಾಂತರ ಪ್ರದೇಶದ ಉದ್ಯೋಗ ವಂಚಿತರ ಅನುಕೂಲಕ್ಕಾಗಿ ಉಚಿತವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.www. vivekudyoga.com ವೆಬ್ ಸೈಟಿನಲ್ಲಿ ಅರ್ಜಿಯನ್ನು ತುಂಬಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಉದ್ಯೋಗ ಮೇಳದ ಗೌರವಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್,ಅಧ್ಯಕ್ಷ ಎಸ್,ಆರ್,ರಂಗಮೂರ್ತಿ,ಉಪಾಧ್ಯಕ್ಷ ರಾಜೇಶ್ ನಾಯ್ಕೋ ಮಾಧ್ಯಮ ಸಮಿತಿ ಸಂಯೋಜಕ ಮುರಳೀಕೃಷ್ಣ ಕೆ.ಎನ್ ಮೊದಲಾದವರು ಉಪಸ್ಥಿತರಿದ್ದರು