ಬಿಒಎಫ್‌ಎ-ಎಂಎಲ್ ಪ್ರಕಾರ ನೋಟು ರದ್ದತಿಯಿಂದ ಸರಕಾರಕ್ಕೆ ಲಾಭ ಆಗಿದ್ದು ಇಷ್ಟು ಮಾತ್ರ !
ಮುಂಬೈ,ಜ.4: ನ.8ರಂದು ರದ್ದುಗೊಳಿಸಲಾಗಿದ್ದ ಹಳೆಯ 500 ಮತ್ತು 1,000 ರೂ.ನೋಟುಗಳ ಪೈಕಿ ಶೇ.95ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿರುವ ಹಿನ್ನೆಲೆಯಲ್ಲಿ ಸರಕಾರವು ಆರ್‌ಬಿಐನಿಂದ ಹೆಚ್ಚುವರಿ ಮಿಗತೆ ವರ್ಗಾವಣೆಯ ರೂಪದಲ್ಲಿ ಅಬ್ಬಬ್ಬಾ ಎಂದರೆ 50,000 ಕೋ.ರೂ.ಗಳ ಲಾಭವನ್ನು ಮಾತ್ರ ಗಳಿಸಬಹುದು ಮತ್ತು ಇದು ಮೊದಲು ಅಂದಾಜಿಸಿದ್ದಕ್ಕಿಂತ ತುಂಬ ಕಡಿಮೆಯಾಗಿದೆ ಎಂದು ಬ್ರೋಕರೇಜ್ ಸಂಸ್ಥೆ ಬ್ಯಾಂಕ್ ಆಫ್ ಅಮೆರಿಕ-ಮೆರಿಲ್ ಲಿಂಚ್(ಬಿಒಎಫ್‌ಎ-ಎಂಎಲ್) ಹೇಳಿದೆ.
ನೋಟು ರದ್ದತಿಯಿಂದ 2017ರ ಮುಂಗಡಪತ್ರವು ಎಷ್ಟು ಮೊತ್ತವನ್ನು ಎತ್ತಬಹುದು? 1,500 ಶತಕೋಟಿ ರೂ.ಎನ್ನುವುದು ನಮ್ಮ ಅಂದಾಜು ಮತ್ತು ಇದು ಮೊದಲು ಅಂದಾಜಿಸಿದ್ದ 2,000 ಶತಕೋಟಿ ರೂ.ಗಿಂತಲೂ ಕಡಿಮೆ ಎಂದು ಅದು ಬುಧವಾರ ತನ್ನ ಟಿಪ್ಪಣಿಯಲ್ಲಿ ತಿಳಿಸಿದೆ.
ಡಿ.19ರ ವೇಳೆಗೆ ಬ್ಯಾಂಕುಗಳು ರದ್ದುಗೊಳಿಸಲಾದ 15.55 ಲ.ಕೋ.ರೂ.ಗಳ ನೋಟುಗಳ ಪೈಕಿ 14ಲ.ಕೋ.ರೂ.ಗೂ ಅಧಿಕ ನೋಟುಗಳನ್ನು ಸ್ವೀಕರಿಸಿದ್ದವು. ಹೀಗಾಗಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿಯಬಹುದು ಎಂದು ನಿರೀಕ್ಷಿಸಲಾಗಿದ್ದ ಕಪ್ಪುಹಣದ ಪ್ರಮಾಣವನ್ನು ಅದು 950 ಶತಕೋಟಿ ರೂ.ಗಳಿಂದ 500 ಶತಕೋಟಿ ರೂ.ಗಳಿಗೆ ತಗ್ಗಿಸಿದೆ ಮತ್ತು ಇಷ್ಟು ಹಣವನ್ನು ಆರ್‌ಬಿಐ ಡಿವಿಡೆಂಡ್ ರೂಪದಲ್ಲಿ ಸರಕಾರಕ್ಕೆ ಸಲ್ಲಿಸಬಹುದಾಗಿದೆ ಎಂದು ಹೇಳಿದೆ.