ಕೋಕಾಕೋಲದ ಅಪಾಯದ ಬಗ್ಗೆ ಅಮೆರಿಕ ನ್ಯಾಯಾಲಯಕ್ಕೆ ದೂರು
ವಾಷಿಂಗ್ಟನ್, ಜ.5: ಕೋಕಾಕೋಲ ಸೇವನೆಯಿಂದ ಆರೋಗ್ಯಕ್ಕೆ ಎದುರಾಗುವ ಅಪಾಯಗಳ ಬಗ್ಗೆ ಗ್ರಾಹಕರನ್ನು ತಪ್ಪು ದಾರಿಗೆಳೆದ ಆರೋಪ ಹೊರಿಸಿ ಕೋಕಾಕೋಲ ಕೋ ಹಾಗೂ ಅಮೆರಿಕನ್ ಬೆವರೇಜ್ ಅಸೋಸಿಯೇಶನ್ ವಿರುದ್ಧ ಪ್ರಾಕ್ಸಿಸ್ ಪ್ರಾಜೆಕ್ಟ್ ನ್ಯಾಯಾಲಯದ ಮೊರೆ ಹೋಗಿದೆ.
ಕೋಕಾಕೋಲ ಮಾರಾಟ ಹೆಚ್ಚಿಸುವ ಒಂದೇ ಉದ್ದೇಶದಿಂದ ಅದರ ಸೇವನೆಗೂ ಬೊಜ್ಜಿನ ಸಮಸ್ಯೆ, ಡಯಾಬಿಟೀಸ್ ಹಾಗೂ ಹೃದಯ ಸಂಬಂಧಿ ಸಮಸ್ಯೆಗೂ ಇರುವ ನಂಟಿನ ಬಗ್ಗೆ ವೈಜ್ಞಾನಿಕ ವರದಿಗಳು ಹೇಳಿದ್ದರೂ ಕಂಪೆನಿ ಅದನ್ನು ಕಡೆಗಣಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
‘ಬ್ಯಾಲೆನ್ಸ್’ ‘ಕ್ಯಾಲೊರೀಸ್ ಇನ್, ಕ್ಯಾಲೊರೀಸ್ ಔಟ್’ ಮುಂತಾದ ಪದಗಳನ್ನು ಉಪಯೋಗಿಸಿ ಗ್ರಾಹಕರನ್ನು ತಪ್ಪು ದಾರಿಗೆಳೆದಿವೆ ಎಂದು ಎರಡೂ ಸಂಸ್ಥೆಗಳನ್ನು ಪ್ರಾಕ್ಸಿಸ್ ದೂರಿದರೆ, ವ್ಯಾಯಾಮದ ಕೊರತೆಯೇ ಬೊಜ್ಜು ಸಮಸ್ಯೆಗೆ ನಿಜವಾದ ಕಾರಣ ಎಂದು ಕೋಕಾಕೋಲ ಹೇಳಿರುವುದಕ್ಕೂ ಅದು ಆಕ್ಷೇಪ ವ್ಯಕ್ತಪಡಿಸಿದೆ.
ಆದರೆ ಈ ದೂರು ಆಧಾರರಹಿತ ಎಂದು ಕೋಕಾಕೋಲದ ವಕ್ತಾರ ಕೆಂಟ್ ಲ್ಯಾಂಡರ್ಸ್ ಹೇಳಿದ್ದಾರಲ್ಲದೆ ಕಂಪೆನಿಗೆ ತನ್ನ ಗ್ರಾಹಕರ ಆರೋಗ್ಯದ ಬಗ್ಗೆ ಕಾಳಜಿಯಿದೆ ಎಂದು ವಿವರಿಸಿದ್ದಾರೆ. ಅತ್ತ ಅಮೆರಿಕನ್ ಬೆವರೇಜ್ ಅಸೋಸಿಯೇಶನ್ ಇಲ್ಲಿಯ ತನಕ ತನ್ನಪ್ರತಿಕ್ರಿಯೆ ನೀಡದೇ ಇದ್ದರೂ, ನವೆಂಬರ್ ತಿಂಗಳಲ್ಲಿ ನೀಡಿದ ಹೇಳಿಕೆಯಲ್ಲಿ ಕಡಿಮೆ ಕ್ಯಾಲರಿ ಹಾಗೂ ಕಡಿಮೆ ಸಕ್ಕರೆಯಿರುವ ಪೇಯಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬದ್ಧವಾಗಿದೆ ಎಂದು ತಿಳಿಸಿದೆ.