ಬಜ್ಪೆ ಏರ್‌ಪೋರ್ಟ್‌ನಲ್ಲಿ 25 ಲ. ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ : ಓರ್ವ ವಶಕ್ಕೆ
ಮಂಗಳೂರು, ಜ. 5: ದುಬೈಗೆ ತೆರಳಲೆಂದು ಗುರುವಾರ ಬೆಳಗ್ಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯೋರ್ವನಿಂದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು 25,07,162 ಲಕ್ಷ ರೂ.ವೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನನ್ನು ಭಟ್ಕಳದ ನಿವಾಸಿ ಮುಹಮ್ಮದ್ ಫಾರೂಕ್ ಅರ್ಮಾರ್ (51) ಎಂದು ಗುರುತಿಸಲಾಗಿದೆ. ಈತನಿಂದ ಯುಎಸ್ ಡಾಲರ್ಸ್, ಬ್ರಿಟಿಷ್ ಪೌಂಡ್, ಯೂರೊ, ಯುಎಇ ದಿರ್ಹಂ, ಸೌದಿ ರಿಯಾಲ್ ಮತ್ತು ಕತಾರ್ ರಿಯಾಲ್ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ವಿರುದ್ಧ 1962 ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅರ್ಮಾರ್ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲೆಂದು ಇಂದು ಬೆಳಗ್ಗಿನ ಜಾವ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಇಮಿಗ್ರೇಶನ್ ಅಧಿಕಾರಿಗಳು ಎಲ್ಲ ತಪಾಸಣೆ ಪ್ರಕ್ರಿಯೆಯನ್ನು ಮುಗಿಸಿದ್ದರು. ಆದರೆ, ಡಿಆರ್‌ಐ ಅಧಿಕಾರಿಗಳು ಆತನ ಬ್ಯಾಗ್‌ನ್ನು ಪರಿಶೀಲಿಸಿದಾಗ ನೋಟಿನ ಕಟ್ಟುಗಳು ಪತ್ತೆಯಾಗಿವೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಡಿಆರ್‌ಐ ಕಚೇರಿಗೆ ಕರೆ ತಂದು ಆತನ ವಿಚಾರಣೆ ನಡೆಸಿದ್ದಾರೆ.
ಈತ ಈ ಹಿಂದೆಯೂ ವಿದೇಶಿ ಕರೆನ್ಸಿ ಸಾಗಾಟ ಮಾಡಿದ್ದ. ಅಲ್ಲದೆ ಗಲ್ಫ್ ರಾಷ್ಟ್ರಗಳಿಂದ ಭಾರಿ ಪ್ರಮಾಣದಲ್ಲಿ ಮೊಬೈಲ್ ಹಾಗೂ ಇತರ ಸೊತ್ತುಗಳನ್ನು ತೆರಿಗೆ ತಪ್ಪಿಸಿ ಊರಿಗೆ ತಂದು ಮಾರಾಟ ಮಾಡುತ್ತಿದ್ದನೆಂದು ಅಧಿಕಾರಿಗಳು ತಿಳಿಸಿದ್ದಾರೆ.