×
Ad

ಜ.7: ಕಾಂಗ್ರೆಸ್‌ನಿಂದ ಡಿಸಿ ಕಚೇರಿ ಮುಂದೆ ಧರಣಿ

Update: 2017-01-05 17:04 IST

ಮಂಗಳೂರು, ಜ.5: ಮೋದಿ ನೇತೃತ್ವದ ಕೇಂದ್ರ ಸರಕಾರವು ನೋಟು ಅಪಮೌಲ್ಯಗೊಳಿಸಿರುವುದನ್ನು ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ನೇತೃತ್ವದಲ್ಲಿ ಜ.7ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಡಿಸಿಸಿ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದರು.

 ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ನೋಟುಗಳನ್ನು ಅಮಾನ್ಯಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆಯಲಿದ್ದು, ಜ.7ರಂದು ದ.ಕ. ಜಿಲ್ಲಾದ್ಯಂತ ಈ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

54 ದಿನಗಳ ಹಿಂದೆ ಮೋದಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಪವೌಲ್ಯಗೊಳಿಸಿದ ಬಳಿಕ ಪ್ರಧಾನಿಯ ಬಹುನಿರೀಕ್ಷಿತ ಭಾಷಣ ಹುಸಿಯಾಗಿದೆ. ಅವರು ಕೊಟ್ಟ ಭರವಸೆಗಳು ಹುಸಿಯಾಗಿವೆ. ಈ ಹಿಂದಿನ ಎಲ್ಲ ಪ್ರಧಾನಮಂತ್ರಿಗಳು ಹೊಸ ಯೋಜನೆಗಳನ್ನು ತರಬೇಕಾದರೆ ಆರ್ಥಿಕ ಸಲಹೆಗಾರರು, ಪಕ್ಷದ ಸದಸ್ಯರು, ವಿರೋಧ ಪಕ್ಷದ ಮುಖಂಡರ ಅಭಿಪ್ರಾಯಗಳನ್ನು ಕೇಳುತ್ತಿದ್ದರು. ಆದರೆ ಮೋದಿ ಬಿಜೆಪಿಯ ಹಿರಿಯರ ಸಲಹೆಯನ್ನು ಕೇಳದೆ ನೋಟುಗಳನ್ನು ಅಮಾನ್ಯಗೊಳಿಸಿದ್ದಾರೆ. ಇದರಿಂದ ದೇಶದೆಲ್ಲೆಡೆ ಆರ್ಥಿಕ ಸಂಕಷ್ಟ ಏರ್ಪಟ್ಟಿದೆ. ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಸ್ಥರು ತೊಂದರೆಯಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದರು.

ಈಗಾಗಲೇ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಹಲವು ಪ್ರಶ್ನೆಗಳನ್ನು ಮೋದಿ ಅವರಿಗೆ ಕೇಳಿದ್ದರೂ ಮೋದಿ ಉತ್ತರಿಸಲಿಲ್ಲ. ಜನಸಾಮಾನ್ಯರ ನಿರೀಕ್ಷೆಯನ್ನು ಹುಸಿಗೊಳಿಸಿ, ತಾವೊಬ್ಬ ಅಪ್ರಾಮಾಣಿಕ ಪ್ರಧಾನಿ ಎಂಬುದನ್ನು ಮೋದಿ ಸಾಬೀತು ಪಡಿಸಿದ್ದಾರೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ಹರಿನಾಥ್, ಕಾರ್ಪೊರೇಟರ್ ಶಶಿಧರ್ ಹೆಗಡೆ, ಸುನಿತಾ, ವಿಶ್ವಾಸ್‌ಕುಮಾರ್ ದಾಸ್, ಹುಸೈನ್ ಕಾಟಿಪಳ್ಳ, ಫಝಲ್ ರಹ್ಮಾನ್, ಪಿಯೂಸ್ ರೊಡ್ರಿಗಸ್, ನಝೀರ್ ಬಜಾಲ್, ಸೇವಾದಳದ ಸಂಚಾಲಕ ಅಶ್ರಫ್, ಶಾಲೆಟ್ ಪಿಂಟೊ, ಟಿ.ಕೆ. ಸುಧೀರ್ ಉಪಸ್ಥಿತರಿದ್ದರು...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News