ಇರುವೈಲು : ನೀರಿನ ಸಂಪರ್ಕ ಕಡಿತ, ಸಂತ್ರಸ್ತರಿಂದ ಪ್ರತಿಭಟನೆ

Update: 2017-01-05 12:12 GMT

ಮೂಡುಬಿದಿರೆ,ಜ.5: ಇಲ್ಲಿಗೆ ಸಮೀಪದ ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ತೋಡಾರು ಕಂದೊಟ್ಟು ಪರಿಸರದ ದಲಿತ ನಿವಾಸಿಗಳ ಮನೆಗಳಿಗೆ ಈ ಹಿಂದೆ ಕಲ್ಪಿಸಲಾಗಿರುವ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯತ್ ವತಿಯಿಂದ ಕಡಿತಗೊಳಿಸಿದ್ದಾರೆಂದು ಆರೋಪಿಸಿ, ದ.ಕ ಜಿಲ್ಲೆ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಇರುವೈಲು ಗ್ರಾಮ ಪಂಚಾಯತ್ ಕಚೇರಿ ಎದುರು ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು.

  ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಲಿಂಗಪ್ಪ ಸುದ್ದಿಗಾರರಿಗೆ ಮಾಹಿತಿ ನೀಡಿ, ಸುಮಾರು 35 ವರ್ಷಗಳ ಹಿಂದೆ ಕಂದೋಟ್ಟು ಪರಿಸರದಲ್ಲಿ ವಾಸವಾಗಿರುವ 13 ಕುಟುಂಬಗಳಿಗೆ ಏಳು ವರ್ಷಗಳ ಹಿಂದೆ ಅಂದಿನ ಹೊಸಬೆಟ್ಟು ಗ್ರಾ.ಪಂ ಕುಡಿಯುವ ನೀರಿನ ವ್ಯವಸ್ಥೆಗೆ ನಳ್ಳಿಯನ್ನು ಅಳವಡಿಸಿತ್ತು. ಇದೀಗ ಈ ಪ್ರದೇಶವು ಇರುವೈಲು ಪಂಚಾಯಿತಿಗೆ ವ್ಯಾಪ್ತಿಗೊಳ್ಳಪಟ್ಟಿದ್ದು, ಪಂಚಾಯಿತಿಯವರು ಕಳೆದ 10 ದಿನಗಳ ಹಿಂದೆ ನಳ್ಳಿ ನೀರಿನ ಸಂಪರ್ಕ ಕಡಿತಗೊಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳು ನೀರಿನ ಶುಲ್ಕ 1 ಸಾವಿರ ಹಾಗೂ 1 ಸಾವಿರ ರೂಪಾಯಿ ದಂಡವನ್ನೂ ವಿಧಿಸಿದ್ದಾರೆ. ಸಮಿತಿಯ ವತಿಯಿಂದ ಸಮಸ್ಯೆಗೆ ಸ್ಪಂದಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದೂರದ ಬಾವಿಯೊಂದರಿಂದ ಪ್ರತಿದಿನವೂ ನೀರು ತರುವ ಅನಿವಾರ್ಯತೆ ಇಲ್ಲಿನ ಜನರಿಗಿದೆ. ಈ ಕುರಿತು ಮೂಡುಬಿದಿರೆ ತಹಸೀಲ್ದಾರ್, ಮೂಡುಬಿದಿರೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇವೆ. ಆದರೆ ಪಂಚಾಯತ್ ಸೂಕ್ತ ಸ್ಪಂದನೆ ನೀಡುವಲ್ಲಿ ಹಿಂದೇಟು ಹಾಕುತ್ತಿದೆ. ಎಸ್‌ಸಿ,ಎಸ್‌ಟಿ ಅನುದಾನವನ್ನೂ ಕೂಡ ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಂತ್ರಸ್ತ 13 ಕುಟುಂಬಗಳ ಸದಸ್ಯರು ಭಾಗವಹಿಸಿ, ಪಂಚಾಯತ್ ವಿರುದ್ಧ ಘೋಷಣೆ ಕೂಗಿದರು. ಸಮಾಜ ಕಲ್ಯಾಣ ಸಚಿವ, ದ.ಕ ಜಿಲ್ಲಾಧಿಕಾರಿ, ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರು, ಪರಿಶಿಷ್ಟ ಜಾತಿ, ಪಂಗಡಗಳ ಆಯೋಗಕ್ಕೂ ದಲಿತ ಹಕ್ಕುಗಳ ಸಮಿತಿಯಿಂದ ದೂರು ಸಲ್ಲಿಸಲಾಗಿದೆ.

 ದಲಿತ ಹಕ್ಕುಗಳ ಸಮಿತಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ವಾಲ್ಪಾಡಿ, ಕಾರ್ಯದರ್ಶಿ ಕೃಷ್ಣಪ್ಪ, ಸಂಚಾಲಕಿ ಗಿರಿಜಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News