ಪದ್ಮಭೂಷಣ ವಿ.ಪಿ.ಧನಂಜಯನ್ ಅವರಿಗೆ ಆಳ್ವಾಸ್ ವಿರಾಸತ್-2017ರ ಪ್ರಶಸ್ತಿ

Update: 2017-01-05 12:37 GMT

ಮೂಡುಬಿದಿರೆ,ಜ.5 : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆಯುವ 23ನೇ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ "ಆಳ್ವಾಸ್ ವಿರಾಸತ್ 2017"ರ ಪ್ರಶಸ್ತಿಯನ್ನು ಪದ್ಮಭೂಷಣ ವಿ.ಪಿ.ಧನಂಜಯನ್ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ವಿರಾಸತ್‌ನ ರೂವಾರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಅವರು ಗುರುವಾರದಂದು ತನ್ನ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಜ.13ರಿಂದ 15ರವರೆಗೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಬಯಲು ರಂಗ ವೇದಿಕೆಯಲ್ಲಿ ನಡೆಯುವ ಆಳ್ವಾಸ್ ವಿರಾಸತ್‌ನಲ್ಲಿ ರೂ 1ಲಕ್ಷ ನಗದಿನೊಂದಿಗೆ ಪ್ರಶಸ್ತಿ ಪತ್ರವನ್ನಿಟ್ಟು ಪುರಸ್ಕರಿಸಲಾಗುವುದು.

ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ ವಿ.ಪಿ ಧನಂಜಯರೆಂದೇ ಖ್ಯಾತರು. ಎ.30 1939ರಲ್ಲಿ ಕೇರಳದ ಪಯ್ಯನ್ನೂರಿನಲ್ಲಿ ಜನಿಸಿದರು. ಕಡು ಬಡತನದಲ್ಲೇ ಬೆಳೆದ ಇವರು ತನ್ನ ತಂದೆಯ ನಾಟಕ ತಂಡದಲ್ಲಿ ಊರೂರು ಅಲೆದು ನಾಟಕದಲ್ಲಿ ಬಣ್ಣ ಹಚ್ಚುತ್ತಿದ್ದರು. ಮದ್ರಾಸಿನ ಕಲಾ ಕ್ಷೇತ್ರವನ್ನು ತನ್ನ ಪ್ರತಿಭೆಯ ಮೂಲಕ ಪ್ರವೇಶಿಸಿದ ಅವರು ರುಕ್ಮೀಣಿದೇವಿ ಅವರ ಮಾರ್ಗದರ್ಶನದಲ್ಲಿ ಕಥಕ್ಕಳಿ ಮತ್ತು ಭರತನಾಟ್ಯದಲ್ಲಿ ಪಳಗಿ ಖ್ಯಾತ ಪುರುಷ ನೃತ್ಯ ಪಟುವಾಗಿ ಪ್ರಸಿದ್ಧರಾದವರು.

 ಖ್ಯಾತ ನೃತ್ಯಗಾರ್ತಿ ಶಾಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿ.ಪಿ.ಧನಂಜಯನ್ ದಂಪತಿಗಳು ನೃತ್ಯ ಕ್ಷೇತ್ರದಲ್ಲಿ "ಧನಂಜಯನ್ಸ್" ಎಂದೇ ಖ್ಯಾತರಾಗಿದ್ದಾರೆ. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಭೂಷಣವೂ ಸೇರಿದಂತೆ ಕೇರಳ, ತಮಿಳ್ನಾಡು ಸರಕಾರಗಳ ಹಾಗೂ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗಳಿಗೆ, ಗೌರವಗಳಿಗೆ ಪಾತ್ರರಾಗಿದ್ದಾರೆ.

ಮೂರು ದಿನಗಳ ಕಾಲ ನಡೆಯುವ ಈ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಮೊದಲ ದಿನ ಕೊಳಲು-ಬಾನ್ಸುರಿ ಜುಗಲ್‌ಬಂದಿ "ಪ್ರಥಮ ಸಮ್ಮಿಲನ", ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ "ನೃತ್ಯ ವೈವಿಧ್ಯ". 2ನೇ ದಿನ ಟ್ರಿನಿಟಿ ತಂಡದಿಂದ "ನಾದ ಮಾಧುರ್ಯ", ಬೆಂಗಳೂರಿನ ಮಾಸ್ಟರ್ ರಾಹುಲ್ ವೆಲ್ಲಾಲ್ ಅವರಿಂದ ದೇವರಮನಾಮ, ಅಂಗರಾಗ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ನೃತ್ಯೋತ್ಸವ. ಮೂರನೇ ದಿನ ಹಿಂದಿ ಚಿತ್ರರಂಗದ ಪ್ರಖ್ಯಾತ ಹಿನ್ನಲೆ ಗಾಯಕರಾದ ಶಾನ್ ಮತ್ತು ಪಾಯಲ್ ದೇವ್ ಮುಂಬೈ ಇವರಿಂದ ಸಂಗೀತ ರಸಸಂಜೆ, ಉಡುಪಿ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್‌ನ ತಂಡದಿಂದ ಗಾನಾರ್ಚನ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ನಡೆಯಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News