ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ : ಬಿಎಸ್‌ಪಿ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ

Update: 2017-01-05 13:50 GMT

ಲಕ್ನೊ, ಜ.5: ಉಳಿದ ಪಕ್ಷಗಳನ್ನು ಹಿಂದಿಕ್ಕಿ , ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ತನ್ನ 100 ಮಂದಿ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಹುಜನ ಸಮಾಜವಾದಿ ಪಕ್ಷ(ಬಿಎಸ್‌ಪಿ) ಬಿಡುಗಡೆ ಮಾಡಿದ್ದು, ಇದರಲ್ಲಿ ಮೂರನೇ ಒಂದಂಶಕ್ಕಿಂತಲೂ ಹೆಚ್ಚಿನ ಅಭ್ಯರ್ಥಿಗಳು ಮುಸ್ಲಿಂ ಸಮುದಾಯದವರು.

 ರಾಜ್ಯದಲ್ಲಿರುವ ಮತದಾರರ ಪೈಕಿ ಸುಮಾರು ಶೇ.20ರಷ್ಟು ಮುಸ್ಲಿಂ ಮತದಾರರು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪ್ರಥಮ ಪಟ್ಟಿಯಲ್ಲಿ ಆ ಸಮುದಾಯಕ್ಕೆ ಸೇರಿದ 36 ಮಂದಿಗೆ ಟಿಕೆಟ್ ನೀಡಲಾಗಿದೆ. ಇತರ ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಬಿಎಸ್‌ಪಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ರಾಜ್ಯ ವಿಧಾನಸಭೆಯ 403 ಸೀಟುಗಳಿಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಹೆಸರನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಮತ್ತು ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪಕ್ಷದ ಅಧಿನಾಯಕಿ ಮಾಯಾವತಿ ಈಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

 ದಲಿತರಿಗೆ 87, ಮುಸ್ಲಿಮರಿಗೆ 97, ಇತರ ಹಿಂದುಳಿದ ವರ್ಗಕ್ಕೆ 106, ಬ್ರಾಹ್ಮಣರಿಗೆ 66, ಕ್ಷತ್ರಿಯರಿಗೆ 36, ಕಯಾಸ್ತಾ, ವೈಷ್ಯ ಮತ್ತು ಪಂಜಾಬಿಗಳಿಗೆ 11 ಸೀಟು - ಇದು ಬಿಎಸ್‌ಪಿ ನಿಗದಿಪಡಿಸಿರುವ ಜಾತೀವಾರು ಸೀಟಿನ ಲೆಕ್ಕಾಚಾ.

  ಮೋದಿ ಸರಕಾರ ಮುಸ್ಲಿಮರ ವಿಷಯದಲ್ಲಿ ತಾರತಮ್ಯದ ಧೋರಣೆ ತಳೆದಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ಗೆ ನೆಲೆಯಿಲ್ಲ ಮತ್ತು ಸಮಾಜವಾದಿ ಪಕ್ಷದೊಳಗೇ ಭಿನ್ನಮತ ಭುಗಿಲೆದ್ದಿರುವ ಕಾರಣ ಮುಸ್ಲಿಮರು ತಮ್ಮ ಮತವನ್ನು ಹಾಳುಮಾಡದೆ ಬಿಎಸ್‌ಪಿಗೆ ನೀಡಬೇಕು. ಹೀಗಾದರೆ ಮಾತ್ರ ಬಿಜೆಪಿಯನ್ನು ದೂರ ಉಳಿಸಲು ಸಾಧ್ಯ ಎಂದವರು ಮತದಾರರಿಗೆ ಕರೆ ನೀಡಿದ್ದಾರೆ. ಅಲ್ಪಸಂಖ್ಯಾತರು ಕನಿಷ್ಠ 125 ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಕಾರಣ ಮುಸ್ಲಿಮರ ಮತಗಳು ವಿಭಜನೆಯಾದರೆ ಅದು ಬಿಜೆಪಿಗೆ ನೆರವಾಗುತ್ತದೆ ಎಂದ ಮಾಯಾವತಿ, ಬಿಎಸ್‌ಪಿ ಜಾತ್ಯಾಧರಿತ ಪಕ್ಷ ಎಂದು ವಿಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ. ರಾಜ್ಯದಲ್ಲಿ ನಾಲ್ಕು ಬಾರಿ ಆಡಳಿತ ನಡೆಸಿದ ಬಿಎಸ್‌ಪಿ, ದಲಿತರೂ ಸೇರಿದಂತೆ ಎಲ್ಲಾ ಜಾತಿಯವರ ಅಭ್ಯುದಯಕ್ಕೆ ದುಡಿದಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News