‘ಸಾಂತ್ವನದಲ್ಲಿ ನೊಂದ ಮಹಿಳೆಯರಿಗೆ ಪೊಲೀಸರಿಂದ ಅಸಹಕಾರ’ : ಮಹಿಳೆ-ಮಕ್ಕಳ ಅಭಿವೃದ್ಧಿ ಇಲಾಖೆ ಸಭೆಯಲ್ಲಿ ದೂರು
ಉಡುಪಿ, ಜ.5: ಬಾಲನ್ಯಾಯ ಕಾಯ್ದೆಯಡಿ ನೋಂದಾವಣೆ ನವೀಕರಿ ಸಲು ಸಿದ್ಧಮಾಡಿಟ್ಟಿರುವ 8 ಸಂಸ್ಥೆಗಳ ಅರ್ಜಿಗಳನ್ನು ಜ.15ರೊಳಗೆ ಸರಕಾರಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಟಿ ವೆಂಕೇಶ್ ಆದೇಶಿಸಿದ್ದಾರೆ.
ಉಡುಪಿ, ಜ.5: ಬಾಲನ್ಯಾಯ ಕಾಯ್ದೆಯಡಿ ನೋಂದಾವಣೆ ನವೀಕರಿ ಸಲು ಸಿದ್ಧಮಾಡಿಟ್ಟಿರುವ 8 ಸಂಸ್ಥೆಗಳ ಅರ್ಜಿಗಳನ್ನು ಜ.15ರೊಳಗೆ ಸರಕಾರಕ್ಕೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಆದೇಶಿಸಿದ್ದಾರೆ. ಗುರುವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಗತಿ ಪರಿಶೀಲನೆ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈಗಾಗಲೇ ನೋಂದಾಯಿಸಲ್ಪಟ್ಟಿರುವ 25 ಸಂಸ್ಥೆಗಳ ಪ್ರಸ್ತಾವನೆ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಎಲ್ಲ ದಾಖಲೆ ಸಲ್ಲಿಸಿರುವ 8 ಸಂಸ್ಥೆಗಳ ಪ್ರಸ್ತಾವನೆಯನ್ನು ತಕ್ಷಣವೇ ಕಳುಹಿಸಿ ಉಳಿದ ಸಂಸ್ಥೆಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಜ.15 ರೊಳಗೆ ಕಳುಹಿಸಿಕೊಡಿ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಸೂಚಿಸಿದರು.
ವಿಶೇಷ ಪಾಲನಾ ಯೋಜನೆಯಡಿ 8 ಲಕ್ಷ ರೂ. ಬಿಡುಗಡೆಯಾಗಿದ್ದು, ಅನುದಾನವನ್ನು ಪಲಾನುಭವಿಗಳಿಗೆ ಆರ್‌ಟಿಜಿಎಸ್ ಮೂಲಕ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರಾಯೋಜಕತ್ವದ ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದ್ದು, ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಿ ಅನುದಾನ ಬಿಡುಗಡೆ ಬಳಕೆ ಮಾಡಲು ಸಜ್ಜಾಗಿ ಎಂದರು.
80 ಮಹಿಳೆಯರಿಗೆ ನೆರವು: 2016-17ನೇ ಸಾಲಿನಲ್ಲಿ ಸಾಂತ್ವನ ಯೋಜನೆ ಯಡಿ 80 ಮಹಿಳೆಯರು ನೆರವು ಕೋರಿ ಬಂದಿದ್ದು, ಸೂಕ್ತ ಸ್ಪಂದನೆ ನೀಡಿ ಕೌಟುಂಬಿಕ ಸಲಹೆಗಳನ್ನು ನೀಡಲಾಗಿದೆ. ಬಂದ ಪ್ರತಿಯೊಂದು ಪ್ರಕರಣದ ಬಗ್ಗೆ ಗಮನಹರಿಸಲಾಗಿದೆ ಎಂದು ಸಾಂತ್ವನ ಸಂಸ್ಥೆಯ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಉಡುಪಿಯಿಂದ 33 ಮಂದಿ ಮಹಿಳೆಯರು, ಕಾರ್ಕಳದಿಂದ 30 ಹಾಗೂ ಕುಂದಾಪುರದಿಂದ 17 ಮಹಿಳೆಯರು ನೆರವು ಯಾಚಿಸಿದ್ದಾರೆ. ಕುಂದಾಪುರ ಮತ್ತು ಕಾರ್ಕಳ ಸಾಂತ್ವನ ಕೇಂದ್ರದ ಪ್ರತಿನಿಧಿಗಳು ಮಾತನಾಡಿ ಈ ಸಂದರ್ಭ ದಲ್ಲಿ ಕೋಟ ಮತ್ತು ಕಾರ್ಕಳದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸುವುದು ಸೇರಿದಂತೆ ದೂರಿನೊಂದಿಗೆ ಹೋದರೆ ಸಹಕಾರ ನೀಡದೆ ಸತಾಯಿಸುತ್ತಾರೆ. ಗರ್ಭಿಣಿ, ಬಾಣಂತಿಯರ ದೂರು ನೀಡಲು ಹೋದರೆ ಸ್ಪಂದಿಸುವುದಿಲ್ಲ ಎಂಬ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಪೊಲೀಸ್ ಇಲಾಖೆ ಇಂತಹ ಸಂದಭರ್ಗಳಲ್ಲಿ ಸ್ಪಂದಿಸಬೇಕಲ್ಲದೆ ಸಿಬ್ಬಂದಿ ಗಳಿಗೆ ಈ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸುವಂತೆಯೂ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚಿಸಿದರು. ಇಂತಹ ಸಂದರ್ಭಗಳಲ್ಲಿ ಸಾಂತ್ವನ ಕೇಂದ್ರದವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಗಮನಕ್ಕೆ ತರಲೂ ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಿಳೆಯರು ನೀಡುವ ದೂರು ದಾಖಲಿಸುವುದು ಸೇರಿದಂತೆ ಪೊಲೀಸ್ ಠಾಣೆಯಲ್ಲಿರುವ ಮಹಿಳಾ ಸಿಬ್ಬಂದಿಗಳು ನೊಂದ ಮಹಿಳೆಯರಿಗೆ ದೂರು ದಾಖಲಿಸಲು ನೆರವಾಗಬೇಕೆಂದು ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹ ಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಜ.31ರೊಳಗೆ ಪೂರ್ಣಗೊಳಿಸಿ. ಇದಕ್ಕೆ ಪಂಚಾಯಿತಿಗಳ ನೆರವನ್ನು ಪಡೆಯಿರಿ ಎಂದೂ ಸಿಇಒ ಸೂಚಿಸಿದರು. ಮಣಿಪಾಲ ವ್ಯಾಪ್ತಿಯಲ್ಲಿ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ವರದಕ್ಷಿಣೆ ಪಿಡುಗು, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ ಮುಂತಾದ ಪಿಡುಗುಗಳ ಬಗ್ಗೆ, ಮಹಿಳೆಯರ ಮತ್ತು ಮಕ್ಕಳ ಸಾಗಾಣೆ ಹಾಗೂ ಮಾರಾಟ ನಿಷೇಧ, ಕೋಟ್ಪಾಮುಂತಾದ ಕಾನೂನುಗಳ ಬಗ್ಗೆ ಜನನಿಬಿಡ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಮಾಹಿತಿ ಕಾರ್ಯಾಗಾರ ನಡೆಸಿ ನಿರಂತರ ಅರಿವು ಮೂಡಿಸುವ ಯತ್ನವಾಗಬೇಕೆಂದು ಜಿಲ್ಲಾಧಿಕಾರಿಗಳು ಸಭೆಯಲ್ಲಿದ್ದ ಅಧಿಕಾರಿ ಗಳಿಗೆ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್, ವಿವಿಧ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿದ್ದರು.