ಆಧಾರ್‌ಗಾಗಿ ಖಾಸಗಿ ಸಂಸ್ಥೆಗಳಿಂದ ದತ್ತಾಂಶ ಸಂಗ್ರಹ ಸೂಕ್ತವಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಜ.5: ಆಧಾರ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಪ್ರಕರಣಗಳ ತ್ವರಿತ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ನಿರಾಕರಿಸಿತಾದರೂ ಆಧಾರ ಯೋಜನೆಗಾಗಿ ಖಾಸಗಿ ಸಂಸ್ಥೆಗಳಿಂದ ದತ್ತಾಂಶ ಸಂಗ್ರಹವು ಸೂಕ್ತವಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಖಾಸಗಿ ಸಂಸ್ಥೆಗಳು ಬಯೊಮೆಟ್ರಿಕ್ ಮಾಹಿತಿಗಳನ್ನು ಸಂಗ್ರಹಿಸುತ್ತಿರುವುದರಿಂದ ಜನರ ಖಾಸಗಿತನದ ಬಗ್ಗೆ ಕಳವಳಗಳು ಸೃಷ್ಟಿಯಾಗಿವೆ. ಹೀಗಾಗಿ ಆಧಾರ ಪ್ರಕರಣಗಳನ್ನು ತುರ್ತಾಗಿ ವಿಚಾರಣೆ ನಡೆಸಬೆಕು ಎಂದು ಅರ್ಜಿದಾರರಲ್ಲೋರ್ವರ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಕೋರಿಕೊಂಡ ಬಳಿಕ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರ ನೇತೃತ್ವದ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
2015,ಅ.15ರಂದು ತಾನು ಈ ಹಿಂದೆ ಹೇರಿದ್ಧ ನಿರ್ಬಂಧಗಳನ್ನು ಹಿಂದೆಗೆದುಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು, ನರೇಗಾ ಸೇರಿದಂತೆ ಸಮಾಜ ಕಲ್ಯಾಣ ಯೋಜನೆಗಳು, ಎಲ್ಲ ಪಿಂಚಣಿ ಯೋಜನೆಗಳು, ಭವಿಷ್ಯನಿಧಿ ಮತ್ತು ಪ್ರಧಾನ ಮಂತ್ರಿ ಜನಧನ್ ಯೋಜನೆಗಳಲ್ಲಿ ಸ್ವಯಂ ಇಚ್ಛೆಯಿಂದ ಆಧಾರ ಬಳಕೆಗೆ ಅನುಮತಿಯನ್ನು ನೀಡಿತ್ತು.