×
Ad

ಹಳೆಯ ನೋಟುಗಳ ಠೇವಣಿ: ಆರ್‌ಬಿಐನಿಂದ ಶೀಘ್ರವೇ ಅಂಕಿಅಂಶ ಬಿಡುಗಡೆ

Update: 2017-01-05 19:36 IST

ಮುಂಬೈ,ಜ.5: ತಾನು ಅಮಾನ್ಯಗೊಂಡಿರುವ ನೋಟುಗಳನ್ನು ಭೌತಿಕ ಶಿಲ್ಕಿನೊಂದಿಗೆ ಹೊಂದಾಣಿಕೆ ಮಾಡುತ್ತಿದ್ದು, ಅಂಕಿಅಂಶಗಳನ್ನು ಶೀಘ್ರವೇ ಬಿಡುಗಡೆಗೊಳಿಸುವುದಾಗಿ ಆರ್‌ಬಿಐ ಗುರುವಾರ ತಿಳಿಸುವುದರೊಂದಿಗೆ ಬ್ಯಾಂಕುಗಳು ಮತ್ತು ಅಂಚೆಕಚೇರಿಗಳಲ್ಲಿ ಜಮೆಯಾಗಿರುವ ಹಳೆಯ 500 ಮತ್ತು 1,000 ನೋಟುಗಳ ಪ್ರಮಾಣದ ಬಗ್ಗೆ ಊಹಾಪೋಹಗಳಿಗೆ ಅಂತ್ಯಹಾಡಿದೆ.

ಹಳೆಯ ನೋಟುಗಳ ಠೇವಣಿಗೆ ಅಂತಿಮ ದಿನವಾಗಿದ್ದ 2016,ಡಿ.30ರವರೆಗೆ ಶೇ.95ಕ್ಕೂ ಅಧಿಕ ಹಳೆಯ ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿವೆ ಎಂದು ವಿವಿಧ ವರದಿಗಳು ಅಂದಾಜಿಸುತ್ತಿರುವ ಹಿನ್ನಲೆಯಲ್ಲಿ ಆರ್‌ಬಿಐನ ಈ ಸ್ಪಷ್ಟನೆ ಹೊರಬಿದ್ದಿದೆ.

ಲೆಕ್ಕಾಚಾರದಲ್ಲಿನ ಸಂಭಾವ್ಯ ತಪ್ಪುಗಳು ಮತ್ತು ಎರಡೆರಡು ಬಾರಿ ಎಣಿಕೆಯಾಗಿರುವ ಸಾಧ್ಯತೆಗಳನ್ನು ನಿವಾರಿಸಲು ಹಳೆಯ ನೋಟುಗಳನ್ನು ಭೌತಿಕ ಶಿಲ್ಕಿನೊಂದಿಗೆ ಹೊಂದಾಣಿಕೆ ಮಾಡುವ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಇದು ಪೂರ್ಣ ಗೊಳ್ಳುವವರೆಗೆ ಯಾವುದೇ ಅಂದಾಜು ಮರಳಿ ಬಂದಿರುವ ಹಳೆಯ ನೋಟುಗಳ ವಾಸ್ತವ ಸಂಖ್ಯೆಗಳನ್ನು ಸೂಚಿಸುವುದಿಲ್ಲ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.

ಡಿ.30ರವರೆಗೆ ರದ್ದುಗೊಂಡಿದ್ದ ಶೇ.95ಕ್ಕೂ ಅಧಿಕ ನೋಟುಗಳು ಅಥವಾ ಸುಮಾರು 15 ಲ.ಕೋ.ರೂ.ಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ವರದಿಗಳು ಅಂದಾಜಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News