×
Ad

ಸಹಾರಾ ಡೈರಿ: ವಿಚಾರಣೆ ಎದುರಿಸಲು ಪ್ರಧಾನಿಗೆ ರಾಹುಲ್ ಸವಾಲು

Update: 2017-01-05 20:04 IST

ಹೊಸದಿಲ್ಲಿ, ಜ.5: ಕಾನೂನು ಕ್ರಮದಿಂದ ಸಹಾರಾ ಇಂಡಿಯಾ ಸಂಸ್ಥೆಗೆ ವಿನಾಯಿತಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆತ್ಮಸಾಕ್ಷಿ ಶುದ್ಧವಾಗಿದ್ದರೆ ವಿಚಾರಣೆ ಎದುರಿಸಿ ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.

 ಸಹಾರಾ ಸಂಸ್ಥೆಗೆ ವಿನಾಯಿತಿಯೋ ಅಥವಾ ಮೋದೀಜಿಗೆ ವಿನಾಯಿತಿಯೋ. ನಿಮ್ಮ ಆತ್ಮಸಾಕ್ಷಿ ಸ್ವಚ್ಛವಾಗಿದ್ದರೆ ತನಿಖೆ ಎದುರಿಸಲು ಯಾಕೆ ಹೆದರಿಕೆ ಎಂದು ಟ್ವೀಟ್ ಮಾಡಿದ್ದಾರೆ.

  ನವೆಂಬರ್ 2014ರಲ್ಲಿ ಸಹಾರಾ ಇಂಡಿಯಾ ಸಂಸ್ಥೆಯ ಮೇಲೆ ನಡೆಸಲಾದ ದಾಳಿಯ ಸಂದರ್ಭ ಹಲವಾರು ರಾಜಕೀಯ ಪಕ್ಷಗಳಿಗೆ ಲಂಚ ನೀಡಿದ ಬಗ್ಗೆ ಉಲ್ಲೇಖವಿದ್ದ ಡೈರಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಕಾನೂನು ಕ್ರಮದಿಂದ ಮತ್ತು ದಂಡ ಪಾವತಿಯಿಂದ ಸಂಸ್ಥೆಗೆ ವಿನಾಯಿತಿ ನೀಡಲಾಗಿದೆ ಎಂದು ಇಂಗ್ಲಿಷ್ ದೈನಿಕವೊಂದರಲ್ಲಿ ವರದಿಯಾಗಿತ್ತು. ದಾಳಿ ವೇಳೆಯಲ್ಲಿ ವಶಪಡಿಸಿಕೊಳ್ಳಲಾದ ಬಿಡಿ ಹಾಳೆಯಲ್ಲಿ ಉಲ್ಲೇಖಿಸಲಾದ ಅಂಶಗಳಿಗೆ ಮಹತ್ವ ನೀಡುವಂತಿಲ್ಲ ಎಂಬ ಸಹಾರಾ ಸಂಸ್ಥೆಯ ವಾದಕ್ಕೆ ಆದಾಯ ತೆರಿಗೆ ಇತ್ಯರ್ಥ ಆಯೋಗವು ಸಹಮತ ವ್ಯಕ್ತಪಡಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.

ದಾಳಿ ವೇಳೆ ವಶಪಡಿಸಿಕೊಳ್ಳಲಾದ 137.58 ಕೋಟಿ ರೂ. ಮೊತ್ತದ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ ಮತ್ತು ಇದನ್ನು 12 ಕಂತುಗಳಲ್ಲಿ ಪಾವತಿಸಬಹುದು ಎಂದು ಆದಾಯ ತೆರಿಗೆ ಇತ್ಯರ್ಥ ಆಯೋಗದ ತೀರ್ಪಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News