ಫಿಲೋಮಿನಾದಲ್ಲಿ ’ಸ್ಪೋಕನ್ ಇಂಗ್ಲೀಷ್ ತರಬೇತಿ’ ಕೋರ್ಸ್ ಉದ್ಘಾಟನೆ
ಪುತ್ತೂರು,ಜ.5: ಭಾರತವು ವೈವಿಧ್ಯತೆಯ ತಾಣವಾಗಿದ್ದು, ವಿವಿಧ ಜನರು ವಿವಿಧ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಇಂಗ್ಲೀಷ್ ಭಾಷೆಯು ಲಿಂಕ್ ಭಾಷೆಯಾಗಿ ಅತ್ಯಂತ ಜನಪ್ರಿಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಸಂದರ್ಭದಲ್ಲಿ ಭಾಷಾ ಪಾಂಡಿತ್ಯವನ್ನು ಬೆಳೆಸಿಕೊಳ್ಳುವಲ್ಲಿ ಹೆಚ್ಚಿನ ಮುತುವರ್ಜಿವಹಿಸಬೇಕಾದ ಅಗತ್ಯವಿದೆ ಎಂದು ಮೂಡಬಿದ್ರಿಯ ವೀಟ ಕೇಂದ್ರದ ನಿರ್ದೇಶಕಿ ಸುಲತಾ ಪ್ರಭಾಕರ್ ಅವರು ಹೇಳಿದರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಯೋಜನಾ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾದ ಸ್ಪೋಕನ್ ಇಂಗ್ಲೀಷ್ ತರಬೇತಿ ಕೋರ್ಸ್‌ನ್ನು ಅವರು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಇಂಗ್ಲೀಷ್ ಭಾಷೆಯು ವಿಶ್ವದಾದ್ಯಂತ ಸಂವಹನದ ಭಾಷೆಯಾಗಿ ಪ್ರಖ್ಯಾತಿಯಾಗಿದೆ. ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಜನರು ಈ ಭಾಷೆಯಲ್ಲಿ ಮಾತನಾಡುತ್ತಿದ್ದು, ಐವತ್ಮೂರು ರಾಷ್ಟ್ರಗಳಲ್ಲಿ ಈ ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಲಾಗಿದೆ. ಇಂಟರ್‌ನೆಟ್‌ನಲ್ಲಿ ಸಿಗುವ ಹೆಚ್ಚಿನ ಮಾಹಿತಿಗಳು ಸಹ ಇಂಗ್ಲೀಷ್ ಭಾಷೆಯಲ್ಲಿಯೇ ಇದೆ ಎಂದು ತಿಳಿಸಿದರು.
ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥ ಆ್ಯಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ದೇಶವು ಭವ್ಯ ಸಂಸ್ಕೃತಿಯ ಆಗರವಾಗಿದ್ದರೂ, ಜನರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ. ವಿದೇಶಿಯರ ವೇಷ ಭೂಷಣ ಮತ್ತು ಜೀವನ ಶೈಲಿಗಳ ಕಡೆಗೆ ಆಕರ್ಷಿತರಾಗುವಾಗ ಅವರು ಉಪಯೋಗಿಸುವ ಭಾಷೆಯನ್ನು ಕಲಿಯುವಲ್ಲಿಯೂ ಪ್ರಯತ್ನಪಡಬೇಕು. ಆಸಕ್ತಿ ಮತ್ತು ಸತತ ಪರಿಶ್ರಮವಿದ್ದಾಗ ಭಾಷಾ ಜ್ಞಾನವನ್ನು ಸಂಪಾದಿಸಬಹುದು ಎಂದು ಹೇಳಿದರು.
ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಪ್ರೊ. ದಿನಕರ ರಾವ್, ಯೋಜನಾ ವೇದಿಕೆಯ ಸಂಚಾಲಕ ಪ್ರದೀಪ್ ಕೆ ಎಸ್, ಸಹ ಪ್ರಾಧ್ಯಾಪಿಕೆ ಮಹಿತಾ ಕುಮಾರಿ, ವೀಟ ಕೌನ್ಸೆಲರ್ ಪ್ರಜ್ವಲಾ ದಾಸ್ ಉಪಸ್ಥಿತರಿದ್ದರು. ಸಹ ಪ್ರಾಧ್ಯಾಪಿಕೆ ಸಂಧ್ಯಾ ಎಚ್ ಸ್ವಾಗತಿಸಿದರು. ರಾಕೇಶ್ ನಾಯ್ಕ ಕೆ ವಂದಿಸಿದರು. ಪವಿತ್ರಾ ಪಿ ಕಾರ್ಯಕ್ರಮ ನಿರೂಪಿಸಿದರು.