ಎತ್ತಿನಹೊಳೆ : ಸಂಸದ ನಳಿನ್ ಕುಮಾರ್ ಕಟೀಲ್ ನಿಲುವು ಸ್ಪಷ್ಟಪಡಿಸಲಿ - ಕಾವು ಹೇಮನಾಥ ಶೆಟ್ಟಿ
ಪುತ್ತೂರು,ಜ.5: ಎತ್ತಿನ ಹೊಳೆ ಯೋಜನೆ ಕಾರ್ಯಗತವಾಗಲಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಹೇಳಿಕೆ ನೀಡಿದ್ದು, ಈ ಹಿನ್ನಲೆಯಲ್ಲಿ ಯೋಜನೆಯ ವಿರುದ್ದ ಹೋರಾಟ ನಡೆಸುತ್ತಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ತನ್ನ ನಿಲುವನ್ನು ಜಿಲ್ಲೆಯ ಜನತೆಯ ಮುಂದೆ ಸ್ಪಷ್ಟ ಪಡಿಸಬೇಕು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆಗ್ರಹಿಸಿದ್ದಾರೆ.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಯೋಜನೆ ಕಾರ್ಯಗತವಾಗಲಿದೆ ಎಂದಿದ್ದಾರೆ. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲೆಯ ಜನರನ್ನು ದಾರಿ ತಪ್ಪಿಸಿ ಚುನಾವಣಾ ಲಾಭ ಪಡೆಯುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದರಿಗೆ ಜಿಲ್ಲೆಯ ಜನತೆಯ ಬಗ್ಗೆ ನೈಜ ಕಾಳಜಿಯಿದ್ದಲ್ಲಿ ತಕ್ಷಣವೇ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಜಿಲ್ಲೆಯ ಜನರೊಂದಿಗೆ ಸೇರಿಕೊಂಡು ಹೋರಾಟ ನಡೆಸಲಿ. ಆಗ ನಾವೆಲ್ಲರೂ ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡಲು ಸಿದ್ದರಿದ್ದೇವೆ ಎಂದ ಅವರು ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆಯೇ ಬಿಜೆಪಿಗರಿಗೆ ತಿಳಿಸಿದ್ದರು. ಆದರೆ ಅದನ್ನು ಮಾಡದೆ ಹೋರಾಟದ ಡೊಂಬರಾಟ ನಡೆಸುತ್ತಾ ಇಲ್ಲಿನ ಕೆಲವೊಂದು ಸ್ವಾಮೀಜಿಗಳಿಗೆ ತಪ್ಪು ಮಾಹಿತಿ ನೀಡುತ್ತಾ ಅವರನ್ನೂ ಬಳಸಿಕೊಳ್ಳುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆ ಕೊಂಡೊಯ್ದು ಅದರಿಂದ ರಾಜಕೀಯ ಲಾಭ ಪಡೆಯುವುದು ಇವರ ಕೆಲಸ ಎಂದರು. ರಾಜಕೀಯ ದೃಷ್ಟಿಯಿಂದ ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಲು ಮುಂದಾಗಿರುವ ಮಠಾಧೀಶರುಗಳು ಇದೀಗ ಯಡಿಯೂರಪ್ಪ ಹೇಳಿಕೆಯ ಬಳಿಕ ತಮ್ಮ ನಿಲುವನ್ನು ಜನತೆಯ ಮುಂದೆ ಪ್ರಕಟ ಪಡಿಸಬೇಕು. ಅಲ್ಲದೆ ಕಾಂಗ್ರೆಸ್‌ನವರೆನ್ನುವ ಮಾಜಿ ಸಚಿವರು ಮತ್ತು ಮಾಜಿ ಶಾಸಕರು ತಮ್ಮ ನಿಲುವನ್ನು ಬಹಿರಂಗಪಡಿಸಬೇಕು. ಇಲ್ಲದಿದ್ದಲ್ಲಿ ಪಕ್ಷ ಬಿಟ್ಟು ಅವರೂ ಹೊರಹೋಗಬೇಕು ಎಂದು ಅವರು ಒತ್ತಾಯಿಸಿದರು.
ಎತ್ತಿನಹೊಳೆ ಯೋಜನೆ ಕಾರ್ಯಗತಗೊಳಿಸುವ ಮೊದಲು ಜಿಲ್ಲೆಯ ಜನರೊಂದಿಗೆ ಸಮಾಲೋಚನೆ ನಡೆಸಿ ಸಮರ್ಪಕ ಮಾಹಿತಿ ಪಡೆದುಕೊಂಡು ಸರ್ಕಾರ ಮುಂದಿನ ಕಾರ್ಯಗಳನ್ನು ಮಾಡಬೇಕಾಗಿದೆ. ಜಿಲ್ಲೆಗೆ ಯಾವುದೇ ರೀತಿಯಲ್ಲಿಯೂ ಅನ್ಯಾಯವಾಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಯೋಜನೆಯ ಸಾಧಕ, ಬಾಧಕಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದ ಅವರು ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.
ತಾಖತ್ತಿದ್ದರೆ ಬೆಂಕಿ ಕೊಡಲಿ:
ಜಿಲ್ಲೆಗೆ ಬೆಂಕಿ ಕೊಡುವುದಾಗಿ ಸಂಸದ ನಳಿನ್ ಕುಮಾರ್ ಹೇಳಿದ್ದಾರೆ. ಅವರಿಗೆ ತಾಖತ್ತಿದ್ದರೆ ಜಿಲ್ಲೆಗೆ ಬೆಂಕಿ ಕೊಡಲಿ. ಅದನ್ನು ನಂದಿಸುವ ಶಕ್ತಿ ಸರ್ಕಾರಕ್ಕಿದೆ. ಇವರಿಗೆ ಬೆಂಕಿ ಹಚ್ಚಿ ಇನ್ನೊಮ್ಮೆ ಗೆಲ್ಲುವುದು ಸಾಧ್ಯವಿಲ್ಲ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿ ಕುಳಿತು ಒಲೆಗೆ ಬೆಂಕಿ ಹಚ್ಚುವ ಕೆಲಸ ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಹಮ್ಮದ್ ಆಲಿ, ಲೋಕೇಶ್ ಹೆಗ್ಡೆ, ಲ್ಯಾನ್ಸಿ ಮಸ್ಕರೇನಸ್, ರವಿಪ್ರಸಾದ್ ಶೆಟ್ಟಿ, ಅನ್ವರ್ ಖಾಸಿಂ, ಸ್ವರ್ಣಲತಾ ಉಪಸ್ಥಿತರಿದ್ದರು.