ಅಮೆರಿಕ ಚುನಾವಣೆ ಮೇಲೆ ರಶ್ಯ ಸೈಬರ್ ದಾಳಿ ನಡೆಸಿದ್ದು ಹೌದು
ವಾಶಿಂಗ್ಟನ್, ಜ. 5: ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯಿಂದ ಕದ್ದ ಮಾಹಿತಿಗಳನ್ನು ರಶ್ಯವು ತೃತೀಯ ಸಂಸ್ಥೆಯೊಂದರ ಮೂಲಕ ವಿಕಿಲೀಕ್ಸ್‌ಗೆ ಒದಗಿಸಿದೆ ಎನ್ನುವುದನ್ನು ಸಾಬೀತುಪಡಿಸುವ ಪುರಾವೆಗಳನ್ನು ಅಮೆರಿಕದ ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿವೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ನವೆಂಬರ್ 8ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನೆಲೆಸಿತ್ತು. ಹಿಲರಿ ತನ್ನ ಎದುರಾಳಿಯನ್ನು ಸೋಲಿಸಿ ಅಧ್ಯಕ್ಷ ಬರಾಕ್ ಒಬಾಮಗೆ ಉತ್ತರಾಧಿಕಾರಿಯಾಗಲಿದ್ದಾರೆ ಎಂಬುದಾಗಿ ವ್ಯಾಪಕವಾಗಿ ಭಾವಿಸಲಾಗಿತ್ತು. ಆದರೆ, ಚುನಾವಣೆಯು ಆಘಾತಕಾರಿ ಫಲಿತಾಂಶವನ್ನು ನೀಡಿದ್ದು, ಟ್ರಂಪ್ ಜಯಭೇರಿ ಭಾರಿಸಿದ್ದರು.
ಸೈಬರ್ ದಾಳಿಯ ನೇತೃತ್ವವನ್ನು ರಶ್ಯದ ಗುಪ್ತಚರ ಸಂಸ್ಥೆಗಳು ವಹಿಸಿದ್ದವು ಎಂಬ ನಿರ್ಧಾರಕ್ಕೆ ತಿಂಗಳುಗಳ ಹಿಂದೆಯೇ ಅಮೆರಿಕದ ಅಧಿಕಾರಿಗಳು ಬಂದಿದ್ದರು. ಆದರೆ, ಕದ್ದ ಮಾಹಿತಿಯ ಪ್ರಸಾರದಲ್ಲಿ ರಶ್ಯದ ಪಾತ್ರವನ್ನು ಸಾಬೀತುಪಡಿಸುವ ಪುರಾವೆಗಳು ಅವರ ಬಳಿ ಇರಲಿಲ್ಲ. ಕದ್ದ ಮಾಹಿತಿಯನ್ನು ರಶ್ಯವು ಡೆಮಾಕ್ರಟಿಕ್ ಅಭ್ಯರ್ಥಿಯ ವಿರುದ್ಧವಾಗಿ ಬಳಸಿಕೊಂಡಿತ್ತು.
ಹೆಚ್ಚುವರಿ ಗುಪ್ತಚರ ಮಾಹಿತಿ ಹೊರಬಿದ್ದ ಹೊತ್ತುಗಾರಿಕೆ ಗಮನಾರ್ಹವಾಗಿದೆ. ಯಾಕೆಂದರೆ, ಸೈಬರ್ ದಾಳಿಗೆ ಪ್ರತಿಕ್ರಿಯಿಸುವಲ್ಲಿ ಅಮೆರಿಕ ವಿಳಂಬಿಸುತ್ತಿರುವ ಬಗ್ಗೆ ಅಧ್ಯಕ್ಷ ಒಬಾಮ ತನ್ನದೇ ಪಕ್ಷದಿಂದ ಟೀಕೆಗೆ ಗುರಿಯಾಗಿದ್ದರು.
ಪ್ರಮುಖ ರಿಪಬ್ಲಿಕನ್ನರು ಸೇರಿದಂತೆ, ಅಮೆರಿಕದ ಸೆನೆಟ್ ಮತ್ತು ಹೌಸ್ ನಾಯಕರು ಈ ವಿಷಯದ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದ್ದರು.
ರಶ್ಯದ ಸೈಬರ್ ದಾಳಿಯ ಕುರಿತ ಅಮೆರಿಕನ್ ಗುಪ್ತಚರ ಸಂಸ್ಥೆಗಳ ವರದಿಯನ್ನು ಒಬಾಮಗೆ ಗುರುವಾರ ಮತ್ತು ಟ್ರಂಪ್‌ಗೆ ಶುಕ್ರವಾರ ಸಲ್ಲಿಸಲಾಗುವುದು. ಆದರೆ, ವರದಿಯ ಅಂಶಗಳ ಬಗ್ಗೆ ಬುಧವಾರ ಭಾರೀ ಚರ್ಚೆಯಾಗಿದೆ.