×
Ad

ಜಿಲ್ಲೆಯ ಜನತೆಗೆ ಕುಡಿಯುವ ನೀರು ನೀಡಲು ಸಜ್ಜಾಗಿ : ಅಧಿಕಾರಿಗಳಿಗೆ ಸಚಿವ ಪ್ರಮೋದ್ ಸೂಚನೆ

Update: 2017-01-05 20:40 IST

ಉಡುಪಿ, ಜ.5: ಬರಪೀಡಿತ ಜಿಲ್ಲೆ ಎಂದು ಅಧಿಕೃತವಾಗಿ ನಮ್ಮ ಜಿಲ್ಲೆ ಘೋಷಿಸಲ್ಪಡದಿದ್ದರೂ ಬೇಸಿಗೆಯ ದಿನಗಳಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಬಾಧಿಸಲಿದೆ. ಹೀಗಾಗಿ ಜನರಿಗೆ ಕುಡಿಯುವ ನೀರಿನ ಅಭಾವಬಾರದಂತೆ ಮುನ್ನಚ್ಚರಿಕೆ ವಹಿಸಿ ಈಗಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

 ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬೇಸಿಗೆಯಲ್ಲಿ ಉಂಟಾಗಬಹುದಾದ ಬರ ಪರಿಸ್ಥಿತಿ ಹಾಗೂ ತುರ್ತು ಕುಡಿಯುವ ನೀರಿನ ಪೂರೈಕೆ ಸಮಸ್ಯೆಗಳ ಕುರಿತಂತೆ ಜಿಪಂ ಇಂಜಿನಿಯರ್ ವಿಭಾಗ, ತಹಶೀಲ್ದಾರ್, ನಗರಸಭೆ, ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಗಳು ಹಾಗೂ ಇಂಜಿನಿಯರ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಈಗಿನಿಂದಲೇ ರೇಷನ್ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬರಿಗೂ ನೀರು ನೀಡಲು ಯೋಜನೆ ರೂಪಿಸಬೇಕು. ಇತ್ತೀಚೆಗೆ ಕೊಡಂಕೂರು ಭೇಟಿಯ ಅನುಭವವನ್ನು ಪ್ರಸ್ತಾಪಿಸಿದ ಸಚಿವರು ತನ್ನ ಕ್ಷೇತ್ರದ ಜನರಿಗೆ 2 ಗಂಟೆ ನೀರು ಅಲಭ್ಯ ಎಂಬುದು ನಂಬಲು ಅಸಾಧ್ಯ ಎಂದರು. ಎಲ್ಲರಿಗೂ ನೀರು ಪೂರೈಕೆ ಅಗತ್ಯ ಕರ್ತವ್ಯವಾಗಿದೆ ಎಂದವರು ನುಡಿದರು.

ಜಿಲ್ಲೆಯಲ್ಲಿ ಲಭ್ಯವಿರುವ ಜಲಮೂಲಗಳ ಹಿನ್ನಲೆಯಲ್ಲಿ 24 ಗಂಟೆ ನೀರು ಪೂರೈಕೆಯಾಗಬೇಕಿತ್ತು. ಆದರೆ ಆಗುತ್ತಿಲ್ಲ ಎಂಬುದರ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಸಚಿವರು, ಸಮಗ್ರ ನೀರಿನ ಯೋಜನೆಯ ಬಗ್ಗೆ ಅಧಿಕಾರಿಗಳು ಯೋಚಿಸಬೇಕು. ಇದಕ್ಕೆಂದೇ ನೋಡಲ್ ಇಲಾಖೆ ಹಾಗೂ ಕನ್ಸಲ್ಟಂಟ್ ಒಬ್ಬರನ್ನು ನೇಮಿಸಬೇಕೆಂದ ಸಚಿವರು, ಶಾಶ್ವತ ಕುಡಿಯುವ ನೀರಿನ ಸಂಬಂದ ರಾಜ್ಯ ಮಟ್ಟದಲ್ಲಿ ಫೆಬ್ರವರಿ ಎರಡು ಅಥವಾ ಮೂರನೇ ವಾರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸುವುದಾಗಿ ತಿಳಿಸಿದರು.

ಜಿಲ್ಲೆಯಿಂದ ಅಗತ್ಯ ಪ್ರಸ್ತಾವನೆಗಳು ಈ ಸಭೆಗೆ ಮೊದಲು ತಯಾರಾಗಿ ಸಭೆಯಲ್ಲಿ ಮಂಡಿಸಲು ಸಿದ್ಜವಾಗಿರಬೇಕು ಎಂದೂ ಪ್ರಮೋದ್ ಮಧ್ವರಾಜ್ ನುಡಿದರು.

 ಕೃಷಿಕರು ನೇರವಾಗಿ ಹೊಳೆಯಿಂದ ನೀರೆತ್ತದಂತೆ ಸೂಚನೆ ನೀಡಬೇಕು ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು, ಮೆಸ್ಕಾಂ ಇಲಾಖೆಯಿಂದ ನೀಡಿರುವ ಸಂಪರ್ಕವನ್ನು ಮರು ಪರಿಶೀಲಿಸುವಂತೆ ಸೂಚಿಸಿದರು. ಬಹು ಗ್ರಾಮ ಕುಡಿಯುವ ನೀರಿನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಜಿಲ್ಲೆಯ ಯಾವೆಲ್ಲ ಭಾಗಗಳು ಈ ಯೋಜನೆಯಡಿ ಬರುತ್ತಿವೆ ಎಂಬ ಮಾಹಿತಿಯನ್ನು ಪಡೆದುಕೊಂಡರು.

 ಈ ನಡುವೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಕಾರ್ಕಳಕ್ಕೆ 14.15 ಲಕ್ಷ ರೂ. ಹಾಗೂ ಕುಂದಾಪುರಕ್ಕೆ 90 ಲಕ್ಷ ರೂ.ಅನುದಾನದ ಅಗತ್ಯವಿದೆ ಎಂದು ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಟಿ ವೆಂಕಟೇಶ್, ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಪವಿಬಾಗಾಧಿಕಾರಿ ಶಿಲ್ಪಾನಾಗ್, ಅಪರ ಜಿಲ್ಲಾಧಿಕಾರಿ ಅನುರಾಧ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News