×
Ad

ಸದ್ದಾಂ ಆಡಳಿತದಲ್ಲಿ ಇರಾಕ್‌ನಲ್ಲಿ ಇರಲಿಲ್ಲ ರಾಸಾಯನಿಕ ಅಸ್ತ್ರಗಳು: ಸಿಐಎ ಅಧಿಕಾರಿ

Update: 2017-01-05 20:46 IST

ವಾಶಿಂಗ್ಟನ್, ಜ. 5: ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಇರಾಕ್‌ನ ಮಾಜಿ ಅಧ್ಯಕ್ಷ ಸದ್ದಾಂ ಹುಸೈನ್ ಅಭಿವೃದ್ಧಿಪಡಿಸಿರಲಿಲ್ಲ ಎನ್ನುವುದು ಆಗಲೇ ಸ್ಪಷ್ಟವಾಗಿತ್ತು ಎಂಬುದಾಗಿ 2003ರಲ್ಲಿ ಸದ್ದಾಂರನ್ನು ವಿಚಾರಣೆಗೆ ಗುರಿಪಡಿಸಿದ ಮಾಜಿ ಸಿಐಎ ವಿಶ್ಲೇಷಕ ಜಾನ್ ನಿಕ್ಸನ್ ಹೇಳಿದ್ದಾರೆ.

ಇರಾಕ್ ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಹೊಂದಿದೆ ಎಂಬ ಕಾರಣ ನೀಡಿ ಅಮೆರಿಕವು ಆ ದೇಶದ ಮೇಲೆ 2003ರಲ್ಲಿ ಯುದ್ಧ ನಡೆಸಿತ್ತು. ಆ ವರ್ಷದ ಡಿಸೆಂಬರ್‌ನಲ್ಲಿ ಗುಹೆಯೊಂದರಲ್ಲಿ ಅಡಗಿದ್ದ ಸದ್ದಾಂರನ್ನು ಅಮೆರಿಕದ ಪಡೆಗಳು ಸೆರೆಹಿಡಿದವು.

ಸದ್ದಾಂರನ್ನು ವಿಚಾರಣೆಗೆ ಗುರಿಪಡಿಸುವ ಹೊಣೆಯನ್ನು ನಿಕ್ಸನ್‌ಗೆ ವಹಿಸಲಾಗಿತ್ತು.
ಸದ್ದಾಂ ಸಾಮೂಹಿಕ ವಿನಾಶದ ಅಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎನ್ನುವುದಕ್ಕೆ ಯಾವುದಾದರೂ ಪುರಾವೆ ಇದೆಯೇ ಎನ್ನುವುದನ್ನು ತಿಳಿಯಲು ಶ್ವೇತಭವನ ತುದಿಗಾಲಲ್ಲಿ ನಿಂತಿತ್ತು ಎಂದು ಅವರು ಹೇಳುತ್ತಾರೆ.

ಆದರೆ, ಸದ್ದಾಂ ಮತ್ತು ಅವರ ಸಲಹಾಕಾರರನ್ನು ವಿಚಾರಿಸಿದ ಬಳಿಕ ಹಾಗೂ ತನಿಖೆ ನಡೆಸಿದ ಬಳಿಕ, ಇರಾಕ್‌ನ ಪರಮಾಣು ಅಸ್ತ್ರ ಕಾರ್ಯಕ್ರಮವು ವರ್ಷಗಳ ಮೊದಲೇ ನಿಂತಿತ್ತು ಎಂಬ ನಿರ್ಧಾರಕ್ಕೆ ಬರಬೇಕಾಯಿತು ಎಂದು ನಿಕ್ಸನ್ ಬಿಬಿಸಿಗೆ ಹೇಳಿದರು.

ಈ ತೀರ್ಮಾನದ ಹಿನ್ನೆಲೆಯಲ್ಲಿ, ತನ್ನ ತಂಡ ತನ್ನ ಕೆಲಸದಲ್ಲಿ ವಿಫಲವಾಗಿದೆ ಎಂಬುದಾಗಿ ಅಮೆರಿಕದ ಆಡಳಿತ ಪರಿಗಣಿಸಿತು ಎಂದು ನಿಕ್ಸನ್ ನುಡಿದರು.
ಅದಕ್ಕೆ ಪ್ರತೀಕಾರವೆಂಬಂತೆ, ಆಗಿನ ಅಧ್ಯಕ್ಷ ಜಾರ್ಜ್ ಡಬ್ಲು. ಬುಶ್‌ರನ್ನು ಸಂದರ್ಶಿಸಲು ತನಗೆ 2008ರವರೆಗೂ ಅವಕಾಶ ನಿರಾಕರಿಸಲಾಯಿತು. ಈ ನಡುವೆ, 2006ರಲ್ಲಿ ಸದ್ದಾಂರನ್ನು ಗಲ್ಲಿಗೇರಿಸಲಾಗಿತ್ತು.ನಿಕ್ಸನ್ 2011ರಲ್ಲಿ ಸಿಐಎಯನ್ನು ತೊರೆದರು.


ಬುಶ್‌ರನ್ನು ವಾಸ್ತವದಿಂದ ದೂರವಿಡಲಾಗಿತ್ತು :

ಬುಶ್‌ರನ್ನು ವಾಸ್ತವದಿಂದ ದೂರವಿಡಲಾಗಿತ್ತು ಹಾಗೂ ಅವರ ಸಲಹೆಗಾರರು ‘ಕೋಲೆ ಬಸವ’ರಾಗಿದ್ದರು ಎಂದು ನಿಕ್ಸನ್ ಕೆಂಡ ಕಾರಿದರು. ‘‘ಸಿಐಎಯಲ್ಲಿರುವ ನಾವು ಹೇಳುವ ಮಾತುಗಳಿಗೆ ಬೆಲೆಯಿದೆ ಹಾಗೂ ಅಧ್ಯಕ್ಷರು ಕೇಳುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ನಾವು ಹೇಳುವುದಕ್ಕೆ ಏನೂ ಬೆಲೆಯಿಲ್ಲ, ರಾಜಕೀಯವು ಬೇಹುಗಾರಿಕೆಯನ್ನು ಹಿಮ್ಮೆಟ್ಟಿಸುತ್ತದೆ’’ ಎಂದರು.

ಸದ್ದಾಂ ಪತನದ ಬಳಿಕ ಇರಾಕ್‌ನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ತನಗೆ ನಾಚಿಕೆಯಾಗುತ್ತದೆ ಎಂದು ಅವರು ನುಡಿದರು.

ಇರಾಕ್ ಮೇಲೆ ಅಮೆರಿಕ ನೇತೃತ್ವದ ದಾಳಿ ನಡೆದ ಬಳಿಕ ಆ ದೇಶದಲ್ಲಿ ಏನಾಗುತ್ತದೆ ಎಂಬುದನ್ನು ಯೋಚಿಸುವ ಗೋಜಿಗೆ ಬುಶ್ ಆಡಳಿತ ಹೋಗಲಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News