×
Ad

ಲಂಚ ಸ್ವೀಕಾರ: ಗಾಯತ್ರಿ ನಾಯಕ್ ಆಸ್ಪತ್ರೆಗೆ ದಾಖಲು

Update: 2017-01-05 21:14 IST

ಮಂಗಳೂರು, ಜ. 5: ಲಂಚ ಸ್ವೀಕಾರ ಮಾಡುವ ಸಂದರ್ಭದಲ್ಲಿ ರೆಡ್‌ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ)ದ ಬಲೆಗೆ ಬಿದ್ದಿದ್ದ ವಿಶೇಷ ಭೂಸ್ವಾಧೀನಾಧಿಕಾರಿ ಗಾಯತ್ರಿ ಎನ್.ನಾಯಕ್ ಅವರು ಅಸೌಖ್ಯ ಕಾರಣ ಒಡ್ಡಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಸರಗೋಡಿನ ಯೋಗೀಶ್ ಎಂಬವರು ನೀಡಿದ ದೂರಿನಂತೆ ಎಸಿಬಿ ಅಧಿಕಾರಿಗಳು ಬುಧವಾರ ನಗರದ ಮಿನಿ ವಿಧಾನ ಸೌಧದ ಬಳಿಯ ವಿಶೇಷ ಭೂಸ್ವಾಧೀನಾಧಿಕಾರಿಯ ಕಚೇರಿಗೆ ದಾಳಿ ಮಾಡಿ ಗಾಯತ್ರಿ ನಾಯಕ್ ಮತ್ತು ಕಚೇರಿ ಸಹಾಯಕ ತುಕ್ರಪ್ಪನನ್ನು ಬಂಧಿಸಿದ್ದರು. ಭೂಸ್ವಾಧೀನಕ್ಕೆ ಸಂಬಂಧಿಸಿ ಪರಿಹಾರ ಮೊತ್ತ ವಿತರಣೆಗಾಗಿ 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಗಾಯತ್ರಿ ನಾಯಕ್ ಹಾಗೂ ತುಕ್ರಪ್ಪ ಎಸಿಬಿ ಬಲೆಗೆ ಬಿದ್ದಿದ್ದರು. ಗಾಯತ್ರಿ ನಾಯಕ್ ಹಾಗೂ ಕಚೇರಿ ಸಹಾಯಕ ತುಕ್ರಪ್ಪನನ್ನು ಬುಧವಾರ ಸಾಯಂಕಾಲ ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭ ವೈದ್ಯರು ಇಬ್ಬರಿಗೂ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿದ್ದರು. ಅದರಂತೆ ನ್ಯಾಯಾಧೀಶರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಎಸಿಬಿ ಅಧಿಕಾರಿಗಳು ಆರೋಪಿಗಳಾದ ಗಾಯತ್ರಿ ಎನ್.ನಾಯಕ್ ಹಾಗೂ ತುಕ್ರಪ್ಪನನ್ನು ಉಪಕಾರಾಗೃಹಕ್ಕೆ ಬಿಟ್ಟು ಹೋದ ತಕ್ಷಣ ಅಷ್ಟರ ತನಕ ಆರೋಗ್ಯವಾಗಿದ್ದ ಗಾಯತ್ರಿ ನಾಯಕ್‌ಗೆ ಏಕಾಏಕಿ ಸುಸ್ತು, ತಲೆ ಸುತ್ತು ಕಂಡು ಬಂದಿದೆ. ಈ ಸಂದರ್ಭದಲ್ಲಿ ಅವರು ಆಸ್ಪತ್ರೆಗೆ ದಾಖಲಿಸುವಂತೆ ಕೋರಿಕೊಂಡಿದ್ದಾರೆ. ಆಕೆಯ ಕೋರಿಕೆಯಂತೆ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಗುರುವಾರ ಬೆಳಗ್ಗೆ ವಾರ್ಡ್‌ಗೆ ಸ್ಥಳಾಂತರ ಮಾಡಿದ್ದಾರೆ.

ಆರೋಗ್ಯವಂತರಾಗಿದ್ದ ಅವರು ಜೈಲು ವಾಸ ತಪ್ಪಿಸಲು ಈ ಅಸೌಖ್ಯದ ನಾಟಕವಾಡಿದ್ದಾರೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News