×
Ad

ಭಾರತೀಯ ನಾಗರೀಕತೆಯ ಹೃದಯಬಡಿತ ಸಂಸ್ಕೃತ:ಸಂಸ್ಕೃತ ಪ್ರದರ್ಶಿನಿ ಉದ್ಘಾಟಿಸಿ ಡಾ.ಲಕ್ಷ್ಮೀನಾರಾಯಣ

Update: 2017-01-05 21:59 IST

ಉಡುಪಿ, ಜ. 5: ಸಂಸ್ಕೃತ ಯಾವತ್ತೂ ಮೃತ ಭಾಷೆಯಲ್ಲ. ಅದು ಭಾರತೀಯ ನಾಗರೀಕತೆಯ ಹೃದಯ ಬಡಿತವಿದ್ದಂತೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಸಲಹೆಗಾರ ಡಾ. ಕೆ.ಲಕ್ಷ್ಮೀನಾರಾಯಣ ಹೇಳಿದರು.

 ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶುಕ್ರವಾರ ಸಂಸ್ಕೃತ ಭಾರತಿ ವತಿಯಿಂದ ಪ್ರಾರಂಭಗೊಳ್ಳುವ ಅಖಿಲ ಭಾರತೀಯ ಅಧಿವೇಶನ ಪ್ರಯುಕ್ತ ಪಾರ್ಕಿಂಗ್ ಪ್ರದೇಶದ ಬಳಿ ಏರ್ಪಡಿಸಲಾದ ದೃಶ್ಯ-ಶ್ರವ್ಯ ಪ್ರದರ್ಶಿನಿ ‘ಪರಂಪರಾ’ದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಸಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ತಂತ್ರಜ್ಞಾನವೂ ಸೇರಿದಂತೆ ಎಲ್ಲವೂ ಜಾಗತೀಕರಣದಲ್ಲಿ ಬದಲಾವಣೆಗೊಳ್ಳುತ್ತಿರುವ ಜೊತೆಗೆ ಅತ್ಯಂತ ಪುರಾತನವಾದ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಕಾಪಿಟ್ಟುಕೊಳ್ಳಲು ಸಂಸ್ಕೃತವನ್ನು ಮಾಧ್ಯಮವಾಗಿ ಬಳಕೆಗೆ ತರಬೇಕೆಂದರು. ಹಂಗೇರಿ, ಟರ್ಕಿ ಮೊದಲಾದ ಪ್ರದೇಶಗಳ ಕೆಲವೇ ಭಾಷೆಗಳನ್ನು ಹೊರತುಪಡಿಸಿದರೆ ಭಾರತದ ಎಲ್ಲಾ, ಯೂರೋಪಿನ ಬಹುತೇಕ ಎಲ್ಲಾ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ ಇದೆ ಎಂದವರು ಹೇಳಿದರು.

ಇದು ಎಲ್ಲಾ ಭಾಷೆಗಳಿಗೆ, ವ್ಯವಹಾರಗಳಿಗೆ ಅತಿ ಸೂಕ್ತವಾದ, ಸ್ಪಷ್ಟವಾಗಿ ಬಳಸಿಕೊಳ್ಳಬಹುದಾದ ಭಾಷೆ. ಆದರೆ ಯೂರೋಪಿಯನ್ನರು ಅವರ ಮತಧರ್ಮ ಹಿಂದೂ ಧರ್ಮಕ್ಕಿಂತ ಪುರಾತನ ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲದೆ ತಪ್ಪು ವ್ಯಾಖ್ಯಾನ ಸೃಷ್ಟಿಸಿದರು. ಹೀಗಾಗಿ ಭಾರತೀಯ ಧರ್ಮ, ಸಂಸ್ಕೃತಿಯ ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕಾದ ಅಗತ್ಯವಿದೆ ಎಂದರು.

 ಪರ್ಯಾಯ ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಸಂಸ್ಕೃತ ಭಾರತಿ ರಾಷ್ಟ್ರೀಯ ಅಧ್ಯಕ್ಷ ಡಾ.ಚಾಂದ ಕಿರಣ ಸಲೂಜಾ, ಪ್ರಧಾನ ಕಾರ್ಯದರ್ಶಿ ನಂದಕುಮಾರ್, ಸ್ವಾಗತ ಸಮಿತಿ ಪ್ರ.ಕಾರ್ಯದರ್ಶಿ ಪ್ರೊ. ಎಂ.ಬಿ.ಪುರಾಣಿಕ್ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ಸ್ವಾಗತಿಸಿ ಮಹಾರಾಷ್ಟ್ರದ ಪೂರ್ಣಾವಧಿ ಕಾರ್ಯಕರ್ತ ಶಶಿ ಪ್ರದರ್ಶಿನಿ ಕುರಿತು ವಿವರಿಸಿದರು.

ಜ್ಞಾನಪರಂಪರೆಯ ಹಿನ್ನೋಟದ ‘ಪರಂಪರಾ’

ಯೋಗ, ಸಸ್ಯಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ನೌಕಾಶಾಸ್ತ್ರ, ಕಲೆ, ಮೀಮಾಂಸ, ಆಗಮ, ಆಯುರ್ವೇದ, ಸಾಹಿತ್ಯ, ಮಕ್ಕಳ ಆಟಗಳು, ಹವಾಮಾನ ಜ್ಞಾನ, ವಿಮಾನಶಾಸ್ತ್ರ, ಕೃಷಿವಿಜ್ಞಾನ, ಭ್ರೂಣಶಾಸ್ತ್ರ, ಸಂಗೀತ, ಅರ್ಥಶಾಸ್ತ್ರವೇ ಮೊದಲಾದ ಜ್ಞಾನ ಪರಂಪರೆಯ ಪ್ರದಶನರ್ ‘ಪರಂಪರಾ’ ಪ್ರದರ್ಶಿನಿಯಲ್ಲಿದೆ.

ಇಸ್ರೊ ಖಗೋಳ ವಿಜ್ಞಾನ ಕುರಿತು, ಪಾಂಡುಲಿಪಿ ಮಿಶನ್ ಪ್ರಾಚೀನ ಶಾಸ್ತ್ರ ಸಾಹಿತ್ಯ ಕುರಿತು ಸ್ಟಾಲ್‌ಗಳನ್ನು ಹಾಕಿದೆ. ಸಂಘಟನೆಯ ಚಟುವಟಿಕೆಗಳು, ವಿವಿಧ ದೈನಂದಿನ ವಸ್ತುಗಳಿಗೆ ಸಂಸ್ಕೃತದ ಶಬ್ದ, ಪುಸ್ತಕಗಳ ಸ್ಟಾಲ್‌ಗಳಿವೆ. ಜ. 6ರಿಂದ 8ರವರೆಗೆ ಪ್ರತಿದಿನ ಬೆಳಗ್ಗೆ 8:30ರಿಂದ ರಾತ್ರಿ 8:30ರವೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News