ಸಂತೋಷ್ ನಾಯಕ್ ನಾಪತ್ತೆ ಪ್ರಕರಣ:ಪತ್ನಿಯಿಂದ ಪ್ರವೀಣ್ ಕುಲಾಲ್ ವಿರುದ್ಧ ದೂರು
ಹಿರಿಯಡ್ಕ, ಜ.5: ಕಳೆದ ಡಿ.2ರಂದು ಮಣಿಪಾಲದಿಂದ ನಿಗೂಢವಾಗಿ ನಾಪತ್ತೆಯಾಗಿ ಈವರೆಗೆ ಪತ್ತೆಯಾಗದ 82ನೇ ಕುದಿ ಗ್ರಾಮದ ‘ಶ್ರೀನಿಧಿ’ ನಿವಾಸಿ ಸಂತೋಷ್ ನಾಯಕ್‌ನನ್ನು ಕಳೆದ ತಿಂಗಳು ಹಿರಿಯಡ್ಕದಲ್ಲಿ ಕೊಲೆಯಾದ ರೌಡಿ ಪ್ರವೀಣ್ ಕುಲಾಲ್ ಅಪಹರಿಸಿದ ಬಳಿಕ ಸಾಯಿಸಿ, ಕೊಲೆ ಮಾಡಿ ಶವ ನಾಶ ಮಾಡಿರುವ ಬಗ್ಗೆ ಬಲವಾದ ಸಂದೇಹ ವ್ಯಕ್ತಪಡಿಸಿ ಮೃತರ ಪತ್ನಿ ಸುಮಿತ್ರಾ ನಾಯಕ್ (36) ಹಿರಿಯಡ್ಕ ಠಾಣೆಯಲ್ಲಿ ನಿನ್ನೆ ದೂರು ದಾಖಲಿಸಿದ್ದಾರೆ. ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸುಮಿತ್ರಾ ನಾಯಕ್ ಅವರು ನೀಡಿದ ದೂರಿನಂತೆ ಕಳೆದ ಡಿ.2ರಂದು ಬೆಳಗ್ಗೆ ಸಂತೋಷ್ ನಾಯಕ್ ಅವರು ಕುದಿಯ ಮನೆಯಿಂದ ತನ್ನ ಬಾಡಿಗೆ ಕಾರಿನಲ್ಲಿ ಪತ್ನಿ ಹಾಗೂ ಮಕ್ಕಳನ್ನು ಕುಳ್ಳಿರಿಸಿಕೊಂಡು ಮಕ್ಕಳನ್ನು ಬಡಗುಬೆಟ್ಟು ಶಾಲೆಗೂ ಪತ್ನಿಯನ್ನು ಆಕೆ ಕೆಲಸ ಮಾಡುವ ಮಣಿಪಾಲದಲ್ಲಿ ಬಿಟ್ಟು ಹೋಗಿದ್ದರು.
ಅನಂತರ ಸುಮಿತ್ರಾ ಅವರು ಪತಿಯ ಮೊಬೈಲ್‌ಗೆ ಸತತವಾಗಿ ಮಾಡಿದ ಯಾವ ಕರೆಯನ್ನೂ ಸ್ವೀಕರಿಸಿರಲಿಲ್ಲ. ಇದರಿಂದ ಅವರು ಗಂಡನ ಮನೆಯಾದ ಪರ್ಕಳದ ಸಣ್ಣಕ್ಕಿಬೆಟ್ಟುಗೆ ಹೋಗಿ ಪತಿಯ ನಿರೀಕ್ಷೆಯಲ್ಲಿ ಉಳಿದುಕೊಂಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅದೇ ದಿನ ರಾತ್ರಿ ಐವರು ದುಷ್ಕರ್ಮಿಗಳು ಮನೆಯ ಬಾಗಿಲನ್ನು ಜೋರಾಗಿ ಬಡಿದು ಬಲಾತ್ಕಾರವಾಗಿ ತೆರೆದು ಮನೆ ಮಂದಿಗೆ ಪಿಸ್ತೂಲ್ ತೋರಿಸಿ ಕಪಾಟನ್ನು ಬಲಾತ್ಕಾರವಾಗಿ ತೆರೆದು ಅಲ್ಲಿದ್ದ ಹಣವನ್ನು ತೆಗೆದುಕೊಂಡಿದ್ದರು. ಅಲ್ಲದೇ ಹಣವನ್ನು ದೇವರ ಕೋಣೆಯ ನೆಲದಲ್ಲಿ ಬಚ್ಚಿಟ್ಟಿರುವ ಸಂಶಯದಿಂದ ನೆಲವನ್ನು ಅಗೆದು ನೋಡಿದ ಬಳಿಕ ಯಾವುದೇ ಹಣ ದೊರೆಯದೇ ಇದುದರಿಂದ, ದುಷ್ಕರ್ಮಿಗಳಲ್ಲಿ ಒಬ್ಬ ಮನೆ ಮಂದಿಗೆಲ್ಲಾ ಪಿಸ್ತೂಲ್ ತೋರಿಸಿ ಅವರೆಲ್ಲರನ್ನು ಬಲಾತ್ಕಾರವಾಗಿ ಸಂತೋಷ್ ನಾಯಕ್‌ನ ಕಾರಿನಲ್ಲಿ ಕುಳ್ಳಿರಿಸಿ ಕೊಂಡು ಹೋಗಿರುವುದಾಗಿ ಅದರಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸುಮಿತ್ರಾ ಅವರ ತಾಯಿ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
ತಮ್ಮನ್ನೆಲ್ಲಾ ದುಷ್ಕರ್ಮಿ ಕಾರಿನಲ್ಲಿ ಕರೆದೊಯ್ಯುವಾಗ ತನ್ನ ಮೊಬೈಲ್‌ನಲ್ಲಿದ್ದ ಮಲಗಿದ ಸ್ಥಿತಿಯಲ್ಲಿದ್ದ ಗಂಡಸಿನ ಚಿತ್ರಗಳನ್ನು ತೋರಿಸಿದ್ದು, ಅದು ಗಂಡ ಸಂತೋಷ್ ನಾಯಕರ ಭಾವಚಿತ್ರವಾಗಿದ್ದು, ಅವರ ಒಂದು ಬದಿ ಹೊಡೆತ ತಿಂದು ಕೆಂಪಾಗಿದ್ದುದಾಗಿ ಅವರು ಸುಮಿತ್ರಾ ನಾಯಕ್ ಹೇಳಿದ್ದಾರೆ.
ದುಷ್ಕರ್ಮಿಗಳು ಇವರನ್ನು ಡಿ.3ರ ಬೆಳಗ್ಗೆ 7 ಗಂಟೆಗೆ ಪೆರ್ಣಂಕಿಲ ಗ್ರಾಮದ ವರ್ವಾಡಿಯ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ತನ್ನನ್ನು ಪ್ರವೀಣ್ ಕುಲಾಲ್ ಎಂದು ಗುರುತಿಸಿಕೊಂಡಿದ್ದ. ಸಂತೋಷ್ ಕೆಲವು ಹಣಕಾಸಿನ ಸಮಸ್ಯೆ ಬಗೆಹರಿಸಿದರೆ ಬಿಡುವುದಾಗಿಯೂ ತಿಳಿಸಿದ್ದ ಎಂದಿದ್ದಾರೆ.
ಬಳಿಕ ತಮ್ಮನ್ನು ಅನೇಕ ಕಡೆಗಳಿಗೆ ಕರೆದೊಯ್ದಿದ್ದು, ಕೊನೆಗೆ ಅಪರಿಚಿತ ಸ್ಥಳದ ಹೊಟೇಲ್‌ಗೆ ಕರೆದುಕೊಂಡು ಹೋಗಿ ತನ್ನಲ್ಲಿದ್ದ ಚಿನ್ನದ ಬೆಂಡೋಲೆ, ಚಿನ್ನದ ಚೈನ್,ಚಿನ್ನದ ಉಂಗುರ, ಬೆಳ್ಳಿಯ ಉಂಗುರ, ಬೆಳ್ಳಿಯ ಕಾಲುಚೈನ್ ಅಲ್ಲದೇ ಭಾವನ ಪತ್ನಿ ಶೋಭಾರ ಚಿನ್ನದ ಕರಿಮಣಿ ಸರ, ಚಿನ್ನದ ಕಿವಿಯ ರಿಂಗ್‌ನ್ನು ಬಲಾತ್ಕಾರವಾಗಿ ಪಡೆದು ತನ್ನ ಬಳಿ ಇರಿಸಿಕೊಂಡಿದ್ದ. ಸಂತೋಷ ಹಣ ನೀಡಿದ ಬಳಿಕ ಇವುಗಳನ್ನು ವಾಪಾಸು ಮಾಡುವುದಾಗಿ ಹೇಳಿ ಅಂದು ಅಪರಾಹ್ನ ಬಳಿಕ ಬೇರೆ ಕಪ್ಪು ಬಣ್ಣದ ಕಾರಿನಲ್ಲಿ ಪರ್ಕಳದ ಸಣ್ಣಕ್ಕಿಬೆಟ್ಟುವಿನ ಗಂಡನ ಮನೆಗೆ ಎಲ್ಲರನ್ನು ತಂದು ಬಿಟ್ಟು ಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ನಡುವೆ ಡಿ.19ರಂದು ಪ್ರವೀಣ್ ಕುಲಾಲ್ ಕೊಲೆಯಾಗಿದ್ದು, ತನ್ನ ಪತಿ ಈವರೆಗೆ ವಾಪಾಸು ಬಾರದಿರುವುದರಿಂದ ಆತನೇ ಕೊಲೆ ಮಾಡಿರಬಹುದು. ಅಲ್ಲದೇ ಪೆರ್ಣಂಕಿಲ ಸಮೀಪ ನಿಗೂಢವಾಗಿ ಸುಟ್ಟ ಎಲುಬಿನ ಚೂರುಗಳು ಪತ್ತೆಯಾಗಿರುವ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ನೋಡಿದಾಗ ಅದರಲ್ಲಿ ಮನುಷ್ಯರ ಎಲುಬು ತುಂಡುಗಳು ಕಂಡು ಬಂದಿದೆ. ಪತಿ ವಾಪಾಸು ಬಾರದಿರುವುದರಿಂದ ತನ್ನ ಪತಿಯನ್ನು ಪ್ರವೀಣ್ ಕುಲಾಲನೇ ಸಾಯಿಸಿ ಕೊಲೆ ಮಾಡಿರಬೇಕೆಂದು ಬಲವಾದ ಸಂಶಯವಿದೆ ಎಂದು ಸುಮಿತ್ರಾ ನಾಯಕ್ ಬುಧವಾರ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.